ಸೋಮವಾರಪೇಟೆ, ಸೆ. 22: ಇಲ್ಲಿನ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಕಳೆದ 15 ದಿನಗಳಿಂದ ಆಯೋಜಿಸಲಾಗಿದ್ದ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭ ಕಲ್ಯಾಣ ಮಂಟಪದ ಕಾರ್ಯ ದರ್ಶಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಚ್ಚಂಗಿ ಕಾವೇರಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ಗಿರಿಧರ್ ವಿದ್ಯಾವರ ಮಾತನಾಡಿ, ಸಂಸ್ಕೃತ ಭಾಷೆಯ ಸಾಹಿತ್ಯ, ಮಹತ್ವವನ್ನು ತಿಳಿಸಿದರಲ್ಲದೆ, ಶ್ರೀಮಂತ ಸಂಸ್ಕೃತ ಭಾಷೆಯ ಅವನತಿಗೆ ಕಾರಣವಾದ ಬ್ರಿಟೀಷ್‍ಶಾಹಿ ಆಡಳಿತ ವ್ಯವಸ್ಥೆಯ ಧೋರಣೆಗಳ ಬಗ್ಗೆ ವಿವರಿಸಿದರು. ಪ್ರಾಚೀನ ಭಾಷೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕರಾದ ಚಂದ್ರಹಾಸ ಭಟ್, ಮೃತ್ಯುಂಜಯ, ದಾಮೋದರ್, ಶಿಬಿರದ ಶಿಕ್ಷಕಿ ರೋಹಿಣಿ ಅವರುಗಳು ಉಪಸ್ಥಿತರಿದ್ದರು. ಉಷಾಕುಮಾರಿ ಸ್ವಾಗತಿಸಿ, ಜ್ಞಾನ ವಂದಿಸಿದರು. ಕಳೆದ 10 ದಿನಗಳ ಕಾಲ ನಡೆದ ಶಿಬಿರದಲ್ಲಿ 15 ಮಂದಿ ಭಾಗವಹಿಸಿ ಸಂಸ್ಕೃತ ಸಂಭಾಷಣೆಯನ್ನು ಅಭ್ಯಾಸ ಮಾಡಿದರು.