ಮಡಿಕೇರಿ, ಸೆ. 22: ಕಳೆದ ವರ್ಷ ಪ್ರಕೃತಿ ವಿಕೋಪ ಸಂಭವಿಸಿ ಸಾವು - ನೋವಿನೊಂದಿಗೆ ಸಾಕಷ್ಟು ಕಷ್ಟ - ನಷ್ಟ ಉಂಟಾಗಿರುವ ಮಕ್ಕಂದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದಲ್ಲಿ ಮುನ್ನಡೆದಿದೆ.
ಸಂಘದ ಸಭಾಂಗಣದಲ್ಲಿಂದು ನಡೆದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದರು. ಕಳೆದ ವರ್ಷ ಪ್ರಕೃತಿ ವಿಕೋಪ ದಿಂದಾಗಿ ಕಷ್ಟ - ನಷ್ಟವಾಗಿದ್ದರೂ ಸದಸ್ಯರುಗಳ ಸಹಕಾರದಿಂದಾಗಿ ಸಂಘವು ರೂ. 29,00,729.79 ಲಾಭಗಳಿಸಿದೆ. ಲಾಭಾಂಶದಲ್ಲಿ ಈ ಬಾರಿ ಸದಸ್ಯರುಗಳಿಗೆ ಶೇ. 12 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ತಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದ ಸಂದರ್ಭ ಪ್ರಯತ್ನಪಟ್ಟ ಮೇರೆಗೆ ಡಿಸಿಸಿ ಬ್ಯಾಂಕ್ ಪ್ರಕೃತಿ ವಿಕೋಪ ನಿಧಿಯಿಂದ ಸಾಲಗಾರ ಸದಸ್ಯರಿಗೆ ರೂ. 1,26,24,317 ರಷ್ಟು ಪರಿಹಾರ ಹಣ ಬಂದಿದೆ. ಪ್ರಕೃತಿ ವಿಕೋಪ ನಿಧಿಯ ಮಾನದಂಡದಂತೆ ಸಾಲಗಾರ ಸದಸ್ಯರಿಗೆ, ಪರಿಹಾರ ನೀಡಲಾಗಿದೆ. ಮಕ್ಕಂದೂರು ಸಂಘಕ್ಕೆ ಅತಿ ಹೆಚ್ಚಿನ ಪರಿಹಾರ ಒದಗಿಸಿಕೊಟ್ಟ ಡಿಸಿಸಿ ಬ್ಯಾಂಕ್‍ಗೆ ಕೃತಜ್ಞತೆ ಸಲ್ಲಿಸಿದರು.
ಬ್ಯಾಂಕ್ ವತಿಯಿಂದ ಪ್ರಕೃತಿ ವಿಕೋಪ ನಿಧಿ ಸ್ಥಾಪಿಸಿದ್ದು, ರೂ. 80 ಸಾವಿರ ಸಂಗ್ರಹವಾಗಿದೆ. ಇದಕ್ಕೆ ಸಂಘದಿಂದ ರೂ. 20 ಸಾವಿರ ಸೇರಿಸಿ ರೂ. 1 ಲಕ್ಷ ಮೊತ್ತವನ್ನು ನಿರಖು ಠೇವಣಿ ಇರಿಸಲಾಗಿದೆ. ಇದರಿಂದ ಬರುವ ಬಡ್ಡಿ ಹಣದಲ್ಲಿ ಮುಂದಿನ ಸಾಲಿನಿಂದ ಅತಿ ಹೆಚ್ಚು ಅಂಕಗಳಿಸುವ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವದೆಂದು ಅವರು ತಿಳಿಸಿದರು.
ಸಂಘದಲ್ಲಿ ರೂ. 72.62 ಲಕ್ಷ ಸದಸ್ಯರ ಪಾಲು ಹಣವಿದ್ದು, ವಿವಿಧ ನಿಧಿಗಳು ಸೇರಿದಂತೆ ರೂ. 364.90 ಠೇವಣಿ ಇದೆ; 2018-19ನೇ ಸಾಲಿನಲ್ಲಿ 412 ಮಂದಿಗೆ ರೂ. 577.38 ಲಕ್ಷ ಕಿಸಾನ್ ಕ್ರೆಡಿಟ್ ಸಾಲ ವಿತರಿಸಲಾಗಿದೆ. 412 ಮಂದಿಗೆ ರೂಪೇ ಕಾರ್ಡ್ ನೀಡಲಾಗಿದ್ದು; ಕೆಸಿಸಿ ಸಾಲ ಶೇ. 99.77 ರಷ್ಟು ವಸೂಲಾತಿಯಾಗಿದೆ ಎಂದು ಮಾಹಿತಿ ನೀಡಿದರು. 273 ಮಂದಿಗೆ ರೂ. 74.75 ಲಕ್ಷ ಆಭರಣ ಸಾಲ ನೀಡಲಾಗಿದೆ. ರೂ. 31.25 ಲಕ್ಷ ಜಾಮೀನು ಸಾಲ, 53.70 ಲಕ್ಷ ಎಸ್‍ಹೆಚ್‍ಜಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರಕಾರದಿಂದ 2018-19ನೇ ಸಾಲಿನ ರೂ. 22.38 ಲಕ್ಷ ಬಡ್ಡಿ ಸಹಾಯ ಬಿಡುಗಡೆಯಾಗಿದೆ. ಕೇಂದ್ರ ಸರಕಾರದಿಂದ ಶೇ. 3 ರಂತೆ ರೂ. 8.83 ಲಕ್ಷ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು. ಜಿಲ್ಲಾ ಕೇಂದ್ರ ಬ್ಯಾಂಕ್‍ನಿಂದ ರೂ. 566.20 ಲಕ್ಷ ಸಾಲ ಪಡೆದಿದ್ದು; ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಲಾಗಿದೆ.
ಸಂಘದ ಹಟ್ಟಿಹೊಳೆ ಶಾಖೆಯಲ್ಲಿ ರೂ. 18.24 ಲಕ್ಷ ಉಳಿತಾಯ ಮಾಡಿದ್ದು, ರೂ. 7.85 ಲಕ್ಷ ಆಭರಣ ಸಾಲ ನೀಡಲಾಗಿದೆ. ಪಿಗ್ಮಿ - ಜಾಮೀನು ಸಾಲ ರೂ. 46.67 ಲಕ್ಷ ಮತ್ತು ಸ್ವಸಹಾಯ ಸಂಘದ ಸಾಲ ರೂ. 4.70 ಲಕ್ಷ ವಿತರಿಸಿರುವದಾಗಿ ತಿಳಿಸಿದರು. ರಾಜ್ಯ ಸರಕಾರದಿಂದ 391 ಮಂದಿ ಸದಸ್ಯರಿಗೆ ರೂ. 2,80,76,605 ಅಸಲು ಮನ್ನಾ ಕ್ಲೈಮ್ ಬಿಲ್ಲು ಮಾಡಿದ್ದು, ಈ ಪೈಕಿ 159 ಮಂದಿಗೆ ರೂ. 1,53,00,000 ಲಕ್ಷ ಬಂದಿರುವದಾಗಿ ತಿಳಿಸಿದರು. ವೈದ್ಯನಾಥನ್ ವರದಿ ಜಾರಿಗೆ ಬಂದಿರುವದರಿಂದ ಸಂಘವನ್ನು ಪ್ರತಿ ವರ್ಷ ಲಾಭದಲ್ಲಿ ಕೊಂಡೊಯ್ಯ ಬೇಕಾಗಿದ್ದು; ಸದಸ್ಯರು, ಠೇವಣಿದಾರರು ಹೆಚ್ಚಿನ ವ್ಯವಹಾರ ಮಾಡಿ ಸಹಕರಿಸಿಸುವಂತೆ ಕೋರಿ ದರು. ವಿಕೋಪದ ನಡುವೆಯೂ ಸಂಘವನ್ನು ಲಾಭದಲ್ಲಿ ಮುನ್ನಡೆಸು ತ್ತಿರುವ ಬಗ್ಗೆ ಸದಸ್ಯರುಗಳು ಶ್ಲಾಘನೆ ವ್ಯಕ್ತಪಡಿಸಿದರು. ಕೆಲವರು ಸಲಹೆ - ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸ ಲಾಯಿತು. ಸಂಘದ ನಿರ್ದೇಶಕರು ಗಳಾದ ಕುಂಬಗೌಡನ ಪ್ರಸನ್ನ, ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಬಿ.ಎನ್. ರಮೇಶ್, ಲಕ್ಕಪ್ಪನ ಹೆಚ್. ವಿಜೇತ್, ಕೊಟ್ಟಕೇರಿಯನ ಪ್ರದೀಪ್, ಮಂಜುನಾಥನಾಯ್ಕ, ಹೆಚ್.ಎಂ. ಸುಧಾಕರ, ಪಡಿಯೇಟಿರ ಕವಿತಾ, ಉಕ್ಕೇರಂಡ ನೀಲಮ್ಮ, ಜಿ.ಎಂ. ಸುಲೋಚನಾ, ಡಿಸಿಸಿ ಪ್ರತಿನಿಧಿ ತರನಮ್ ನಾಜ್, ಹಿರಿಯ ಸಹಕಾರಿ ಕುಂಬಗೌಡನ ಉತ್ತಪ್ಪ, ಕಾರ್ಯನಿರ್ವ ಹಣಾಧಿಕಾರಿ ಸಿ.ಬಿ. ಕುಟ್ಟಪ್ಪ, ಸಿಬ್ಬಂದಿ ಗಳಾದ ಎಂ.ಎಸ್. ಶೋಭಾವತಿ, ಎಂ.ಎಸ್. ವಿಜಯಕುಮಾರ್, ಹಟ್ಟಿಹೊಳೆ ಶಾಖಾ ವ್ಯವಸ್ಥಾಪಕ ಸಂತೋಷ್, ಕೆ.ಪಿ. ಪೂರ್ಣಿಮಾ, ಬಿ.ಎಂ. ಚಿಂಗಪ್ಪ ಇದ್ದರು. ಉಪಾಧ್ಯಕ್ಷ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿ, ವಂದಿಸಿದರು.