ಗೋಣಿಕೊಪ್ಪ ವರದಿ, ಸೆ. 22: 36 ನೇ ವರ್ಷದ ಚೆರಿಯಪಂಡ ದಿ. ಕುಶಾಲಪ್ಪ ಜ್ಞಾಪಕಾರ್ಥ ಮಂಗಳೂರು ವಿಶ್ವ ವಿದ್ಯಾಲಯ ಅಂತರ್ ಪದವಿ ಕಾಲೇಜು ಪುರುಷರ ಹಾಕಿ ಟೂರ್ನಿಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ಗೆದ್ದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್‍ನಲ್ಲಿ ಸೋಲನುಭವಿಸಿದ ವೀರಾಜಪೇಟೆ ಕಾವೇರಿ ಕಾಲೇಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ, ವೀರಾಜಪೇಟೆ ಕಾವೇರಿ ಕಾಲೇಜು ಸಹಯೋಗದಲ್ಲಿ ಎರಡು ದಿನ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ; ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ 2-1 ಗೋಲುಗಳ ಗೆಲವು ದಾಖಲಿಸಿತು. ಗೋಣಿಕೊಪ್ಪ ಪರ 32 ನೇ ನಿಮಿಷದಲ್ಲಿ ಕಾರ್ಲ್ ಕಾರ್ಯಪ್ಪ, 35 ನೇ ನಿಮಿಷದಲ್ಲಿ ಬೆಳ್ಯಪ್ಪ ತಲಾ ಒಂದೊಂದು ಗೋಲು ಹೊಡೆದು ಗೆಲವು ತಂದುಕೊಟ್ಟರು. ವೀರಾಜಪೇಟೆ ಪರ 15ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಪೊನ್ನಣ್ಣ ಗೋಲಾಗಿ ಪರಿವರ್ತಿಸಿದರು.
ಸೆಮಿ ಫೈನಲ್‍ನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ಮೂರ್ನಾಡ್ ಪ್ರಥಮ ದರ್ಜೆ ಕಾಲೇಜು ತಂಡವನ್ನು 3-2 ಗೋಲುಗಳ ಮೂಲಕ ರೋಚಕ ಗೆಲವು ದಾಖಲಿಸಿತು. ಗೋಣಿಕೊಪ್ಪ ಪರವಾಗಿ 1ನೇ ನಿಮಿಷದಲ್ಲಿ ಬೆಳ್ಯಪ್ಪ, 4 ರಲ್ಲಿ ಜಿತನ್, 16 ರಲ್ಲಿ ಕವನ್, ಮೂರ್ನಾಡ್ ಪರ 34 ಹಾಗೂ 36 ನೇ ನಿಮಿಷದಲ್ಲಿ 2 ಗೋಲು ಹೊಡೆದರು.
ಎರಡನೇ ಸೆಮಿ ಫೈನಲ್‍ನಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಮಡಿಕೇರಿ ಫೀ.ಮಾ.ಕೆ.ಎಂ. ಕಾರ್ಯಪ್ಪ ತಂಡವನ್ನು 5-4 ಗೋಲುಗಳ ಶೂಟೌಟ್‍ನಲ್ಲಿ ಮಣಿಸಿತು. ಉಭಯ ತಂಡಗಳು 3-3 ಸಮನಾಂತರ ಸಾಧಿಸಿತು. ಶೂಟೌಟ್‍ನಲ್ಲಿ ವೀರಾಜಪೇಟೆ 5-4 ಗೋಲುಗಳಿಂದ ಜಯಿಸಿತು. ವೀರಾಜಪೇಟೆ ಪರ 5ನೇ ನಿಮಿಷದಲ್ಲಿ ಮದನ್, 6ರಲ್ಲಿ ವಿನೇಶ್, 30ರಲ್ಲಿ ನಂಜಪ್ಪ, ಮಡಿಕೇರಿ ಪರ 14ರಲ್ಲಿ ನಿಶಾನ್, 32ರಲ್ಲಿ ಪ್ರದೀಪ್, 35ರಲ್ಲಿ ಸುದೇಶ್ ಗೋಲು ಬಾರಿಸಿದರು.
ಬೆಸ್ಟ್: ಸರಣಿ ಶ್ರೇಷ್ಠ ಬಹುಮಾನವನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಜಿತನ್ ಪಡೆದುಕೊಂಡರು. ಬೆಸ್ಟ್ ಗೋಲ್ ಕೀಪರ್ ಸ್ಥಾನವನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡ ಆಟಗಾರ ಕುಶಾಲಪ್ಪ, ಬೆಸ್ಟ್ ಫುಲ್‍ಬ್ಯಾಕ್ ಸ್ಥಾನವನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ದರ್ಶನ್, ಬೆಸ್ಟ್ ಹಾಲ್ಫ್ ಬಹುಮಾನವನ್ನು ವೀರಾಜಪೇಟೆ ಕಾವೇರಿ ಕಾಲೇಜುವಿನ ಪೊನ್ನಣ್ಣ, ಫಾರ್ವರ್ಡ್ ಸ್ಥಾನವನ್ನು ಮೂರ್ನಾಡ್ ಪ್ರಥಮ ದರ್ಜೆ ಕಾಲೇಜು ತಂಡದ ಪ್ರಜ್ವಲ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಒಲಿಂಪಿಯನ್ ಸಣ್ಣುವಂಡ ಕೆ. ಉತ್ತಪ್ಪ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.
ನಂತರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ತರಬೇತಿ ಕಡಿಮೆ ಇರುವದರಿಂದ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಾರೆ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಚೆರಿಯಪಂಡ ಕೆ. ಉತ್ತಪ್ಪ, ಕೊಡಗು ಮಹಿಳಾ ಹಾಕಿ ಅಸೋಸಿಯೇಷನ್ ಮಾಜಿ ನಿರ್ದೇಶಕಿ ಕೇಳಪಂಡ ಸರಸ್ವತಿ ಅಯ್ಯಪ್ಪ, ಕೂರ್ಗ್ ಪಬ್ಲಿಕ್ ಶಾಲಾ ಆಡಳಿತ ಮಂಡಳಿ ಟ್ರಸ್ಟಿ ಮಾಚಿಮಾಡ ತಿಮ್ಮಯ್ಯ, ಮಾಚಿಮಾಡ ಗೀತಾ ತಿಮ್ಮಯ್ಯ, ಇನ್ಫೋಸಿಸ್ ಮೈಸೂರು ವಲಯ ವ್ಯವಸ್ಥಾಪಕ ಚೆರಿಯಪಂಡ ರೋಶನ್ ಗಣಪತಿ, ದಾನಿ ಚೆರಿಯಪಂಡ ರಾಕೇಶ್ ಪೂವಯ್ಯ, ಪ್ರಾಂಶುಪಾಲ ಪ್ರೊ. ಕಮಲಾಕ್ಷಿ ಬಹುಮಾನ ವಿತರಿಸಿದರು.
-ಸುದ್ದಿಪುತ್ರ