ಗೋಣಿಕೊಪ್ಪ ವರದಿ, ಸೆ. 21 : 36 ನೇ ವರ್ಷದ ಚೆರಿಯಪಂಡ ಕುಶಾಲಪ್ಪ ಜ್ಞಾಪಕಾರ್ಥ ಮಂಗಳೂರು ವಿ.ವಿ. ಅಂತರ್ ಪದವಿ ಕಾಲೇಜು ಪುರುಷರ ಹಾಕಿ ಟೂರ್ನಿಯಲ್ಲಿ ಮೂರ್ನಾಡು ಪ್ರಥಮ ದರ್ಜೆ, ವೀರಾಜಪೇಟೆ ಕಾವೇರಿ ಕಾಲೇಜು, ಮಡಿಕೇರಿ ಫೀ. ಮಾ. ಕಾರ್ಯಪ್ಪ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಸೆಮಿಗೆ ಪ್ರವೇಶ ಪಡೆದವು.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ವೀರಾಜಪೇಟೆ ಕಾವೇರಿ ಕಾಲೇಜು ಸಹಯೋಗದಲ್ಲಿ ಆರಂಭಗೊಂಡ ಟೂರ್ನಿಯಲ್ಲಿ 4 ತಂಡಗಳು ಜಯ ಗಳಿಸಿ ಸೆಮಿಗೆ ಲಗ್ಗೆ ಇಟ್ಟವು.

ಕ್ವಾರ್ಟರ್ ವಿಭಾಗ

ಮೂರ್ನಾಡು ಪ್ರಥಮ ದರ್ಜೆ ತಂಡ 3-0 ಗೋಲುಗಳಿಂದ ವೀರಾಜಪೇಟೆ ಸೆಂಟ್ ಆ್ಯನ್ಸ್ ವಿರುದ್ಧ ಗೆಲವು ಪಡೆಯಿತು. ಮೂರ್ನಾಡು ಪರ ತನ್ಯಲ್, ಪ್ರಜ್ವಲ್, ಅಯ್ಯಣ್ಣ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು.

ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಮಂಗಳೂರು ಸೆಂಟ್ ಅಲೋಸಿಯಸ್ ವಿರುದ್ದ 3-1 ಗೋಲುಗಳ ಜಯ ಪಡೆಯಿತು. ವಿರಾಜಪೇಟೆ ಪರ ಬೋಪಣ್ಣ 3 ಗೋಲು ಹೊಡೆದು ಗೆಲವಿನ ರೂವಾರಿಯಾದರು. ಮಂಗಳೂರು ಪರ ಪ್ರಜ್ವಲ್ ಪೂವಣ್ಣ 1 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.

ಮಡಿಕೇರಿ ಫೀ. ಮಾ. ಕಾರ್ಯಪ್ಪ ತಂಡವು 4-0 ಗೋಲುಗಳಿಂದ ಮಂಗಳೂರು ಯೂನಿವರ್ಸಿಟಿ ಕ್ಯಾಂಪಸ್ ತಂಡವನ್ನು ಸೋಲಿಸಿತು. ಕಾರ್ಯಪ್ಪ ತಂಡದ ಪರ ಮಿಲ್ ಬೋಪಣ್ಣ 2, ನಿತಿನ್, ಸುದೀಶ್ ತಲಾ ಒಂದೊಂದು ಗೋಲು ಹೊಡೆದರು.

ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು 5-0 ಗೋಲುಗಳಿಂದ ಪುತ್ತೂರು ಸೆಂಟ್ ಫಿಲೋಮಿನಾ ತಂಡವನ್ನು ಮಣಿಸಿತು. ಗೋಣಿಕೊಪ್ಪ ಪರ ಬೆಳ್ಯಪ್ಪ ಹಾಗೂ ಉತ್ತಯ್ಯ ತಲಾ 2 ಗೋಲು, ಕಾರ್ಲ್ ಕಾರ್ಯಪ್ಪ 1 ಗೋಲು ಹೊಡೆದರು.

ಪ್ರಥಮ ಸುತ್ತು ಫಲಿತಾಂಶ

ಮಡಿಕೇರಿ ಫೀ. ಮಾ. ಕಾರ್ಯಪ್ಪ ತಂಡವು ಸಾಯಿಶಂಕರ್ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಎಫ್‍ಎಂಸಿ ಪರ ನಿತಿನ್, ಮಿಲನ್ ಬೋಪಣ್ಣ 2 , ಲೀಲೇಶ್, ಸಂದೀಪ್ ಯಾದವ್ ಗೋಲು ಹೊಡೆದರು.

ಮಂಗಳೂರು ಯೂನವರ್ಸಿಟಿ ಕ್ಯಾಂಪಸ್ ತಂಡವು 3-1 ಗೋಲುಗಳಿಂದ ಸೋಮವಾರಪೇಟೆ ಸೆಂಟ್ ಜೋಸೆಫ್ ತಂಡವನ್ನು ಸೋಲಿಸಿತು. ಮಂಗಳೂರು ಪರ ವಿನೋದ್ 2, ನಿತಿನ್, ಸೆಂಟ್ ಜೋಸೆಫ್ ಪರ ಮೋಕ್ಷಿತ್ ಗೋಲು ಬಾರಿಸಿದರು.

ಪುತ್ತೂರು ಸೆಂಟ್ ಫಿಲೋಮಿನಾ ತಂಡವು 6-1 ಗೋಲುಗಳಿಂದ ಮೂಡಬಿದಿರೆ ಆಳ್ವಾಸ್ ತಂಡದ ವಿರುದ್ದ ಜಯಗಳಿಸಿತು. ಫಿಲೋಮಿನಾ ಪರ ನಾಚಪ್ಪ 3, ಅಂಚಿತ್ 2, ಪವನ್, ಆಳ್ವಾಸ್ ಪರ ಕ್ಲಿಪ್ಟನ್ ಗೋಲು ಹೊಡೆದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಅಜ್ಜಿನಿಕಂಡ ಸಿ. ಗಣಪತಿ ಉದ್ಘಾಟಿಸಿದರು. ಈ ಸಂದರ್ಭ ದಾನಿಯಾದ ಚೆರಿಯಪಂಡ ಕುಟುಂಬದ ಹಿರಿಯರಾದ ವಿಠಲ, ಉತ್ತಪ್ಪ, ರಾಕೇಶ್ ಪೂವಯ್ಯ, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ. ಕೆ. ಕಿಶೋರ್‍ಕುಮಾರ್, ಹಿರಿಯ ಹಾಕಿ ಆಟಗಾರ ಮಂಡೇಡ ಗಿರೀಶ್, ಕಾವೇರಿ ಕಾಲೇಜು ಪ್ರಾಂಶುಪಾಲೆ ಪ್ರೊ. ಕಮಲಾಕ್ಷಿ, ನಿರ್ದೇಶಕ ಕುಲ್ಲಚಂಡ ಬೋಪಣ್ಣ, ಟೂರ್ನಿ ಸಂಚಾಲಕಿ ಡಾ. ಎಂ. ಎಂ. ದೇಚಮ್ಮ, ಕ್ರೀಡಾ ಸಂಚಾಲಕಿ ನಡಿಕೇರಿಯಂಡ ಪ್ರಿಯಾ ಮುದ್ದಪ್ಪ ಉಪಸ್ಥಿತರಿದ್ದರು.

-ಸುದ್ದಿಪುತ್ರ.