ಮಡಿಕೇರಿ, ಸೆ. 21: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2018-19ನೇ ಸಾಲಿನಲ್ಲಿ ರೂ. 1,0119703.13 ನಿವ್ವಳ ಲಾಭ ಗಳಿಸಿದ್ದು, ವಾರ್ಷಿಕ 288 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ.18 ಡಿವಿಡೆಂಡ್ ವಿತರಿಸಲು ಹಾಗೂ ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ ರೂ. 2 ಲಕ್ಷ ಪರಿಹಾರ ವಿತರಿಸಲು ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಸಿ. ನಾರಾಯಣ ಗೌಡ ಹೇಳಿದರು.
ಸುಳ್ಯದ ಕೊಡಿಯಾಲ್‍ಬೈಲ್ ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 31.3.2019ರ ಅಂತ್ಯಕ್ಕೆ 10302 ಜನ ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ 2,46,95.050 ಪಾಲು ಬಂಡವಾಳ ಸಂಗ್ರಹಿಸಿರುತ್ತೇವೆ. ಸಂಘಕ್ಕೆ ಸದಸ್ಯರುಗಳಿಂದ ವಿವಿಧ ರೀತಿಯ ಠೇವಣಿಗಳಾದ ಉಳಿತಾಯ ಖಾತೆ, ಮಾಸಿಕ ಠೇವಣಿ, ಶ್ರೀ ವೆಂಕಟರಮಣ ನಿತ್ಯನಿಧಿ ಠೇವಣಿ, ಸಿಬ್ಬಂದಿ ಭದ್ರತಾ ಠೇವಣಿ, ನಿರಖು ಠೇವಣಿ, ಶ್ರೀ ವೆಂಕಟರಮಣ ನಗದುಪತ್ರ, ಶಾಶ್ವತ ನಿರಖು ಠೇವಣಿ ಇತ್ಯಾದಿ ಪಡೆಯುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ರೂ. 65,05,68,552.53ರಷ್ಟು ಠೇವಣಿಯನ್ನು ಸಂಗ್ರಹಿಸಿರುತ್ತೇವೆ. ಈ ಸಹಕಾರಿ ವರ್ಷದಲ್ಲಿ ಒಟ್ಟು ರೂ. 52,70,43,570ರಷ್ಟು ಸಾಲಗಳನ್ನು ವಿತರಿಸಿರುತ್ತೇವೆ ಎಂದರು.
ಸಂಘದಲ್ಲಿ ಒಟ್ಟು ರೂ.4,12,38,499.40ರಷ್ಟು ವಿವಿಧ ನಿಧಿಗಳಿದ್ದು, ಸಂಘದ ದುಡಿಯುವ ಬಂಡವಾಳವು ರೂ. 72,06,69,058.93ರಷ್ಟಾಗಿರುತ್ತದೆ. ಸಂಘದಲ್ಲಿ ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಾ ಬರುತ್ತಿದ್ದು, ವರದಿ ಸಾಲಿನಲ್ಲಿ ಯಶಸ್ಸನ್ನು ಕಂಡು ವಾರ್ಷಿಕ ರೂ.288 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ರೂ.1,01,19,703.13ರಷ್ಟು ನಿವ್ವಳ ಲಾಭ ಗಳಿಸಿ ಸದಸ್ಯರುಗಳಿಗೆ ಶೇ.18 ಡಿವಿಡೆಂಡ್ ವಿತರಿಸುತ್ತಿದ್ದೇವೆ. ಸಂಘದ ಆಡಿಟ್ ವರ್ಗೀಕರಣವು ಎ ತರಗತಿಯಾಗಿದ್ದು, ಇದು ನಮ್ಮ ಆರ್ಥಿಕ ತಖ್ತೆಯ ಪಾರದರ್ಶಕತೆ ಯನ್ನು ಸೂಚಿಸುತ್ತದೆ. ಸಂಘಕ್ಕೆ 0.33.50 ಸೆಂಟ್ಸ್ ಸ್ವಂತ ಜಾಗವಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡ ಸ್ವಂತ ಕಟ್ಟಡವನ್ನು ರಚಿಸಲಾಗಿದೆ ಎಂದರು.
ಸಂಘಕ್ಕೆ 3ನೇ ಬಾರಿ ರಾಜ್ಯದ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಬಂದಿರುವದು ನಮ್ಮ ಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿರುತ್ತದೆ.
2018-19ನೇ ಸಾಲಿನಲ್ಲಿ ಸಂಘದ ಉತ್ತಮ ಸಾಧನೆಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ನಮ್ಮ ಸಂಘವನ್ನು ಗೌರವಿಸಿರುತ್ತಾರೆ. ಸಂಘವು ಪ್ರಸ್ತುತ 11 ಶಾಖೆಗಳನ್ನು ರಾಜ್ಯದ ಬೇರೆ ಬೇರೆ ಭಾಗದಲ್ಲಿ ಪ್ರಾರಂಭ ಮಾಡಿದ್ದು, ಪ್ರಧಾನ ಕಚೇರಿಯನ್ನು ಪ್ರತ್ಯೇಕವಾಗಿ ರಚಿಸಿದ್ದು, ಇದರ ಮೂಲಕವೇ ಎಲ್ಲಾ ಆಡಳಿತವನ್ನು ನಡೆಸುತ್ತಿದ್ದೇವೆ ಎಂದರು.
ಸಂತ್ರಸ್ತರಿಗೆ ನೆರವು
ಕಳೆದ ಬಾರಿ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾದ ಸಂತ್ರಸ್ತರಿಗೆ ಸಂಘದ ಎಲ್ಲಾ ಸದಸ್ಯರು ಒಟ್ಟು ಸೇರಿ ಒಟ್ಟು 101 ಜನರಿಗೆ ರೂ. 8,53,051 ಪರಿಹಾರವನ್ನು ನೇರವಾಗಿ ಸಂತ್ರಸ್ತರಿಗೆ ನೀಡಿ ಅವರ ಕುಟುಂಬಕ್ಕೆ ಸಹಕರಿಸಿ ರುತ್ತೇವೆ. ಈ ಬಾರಿ ಬೆಳ್ತಂಗಡಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳ ಗಾದ ನೆರೆ ಸಂತ್ರಸ್ತರಿಗೆ ಸಂಘದ ವತಿಯಿಂದ ರೂ. 2 ಲಕ್ಷ ಪರಿಹಾರವನ್ನು ನೇರವಾಗಿ ವಿತರಿಸಲು ತೀರ್ಮಾನಿಸಿರುತ್ತೇವೆ. ವಿಶೇಷವಾಗಿ ಈ ಸಹಕಾರಿ ವರ್ಷದಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಎಲ್ಲಾ ಸದಸ್ಯರ ಮಕ್ಕಳು ಹತ್ತನೇ ತರಗತಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೀಡಿ ಗೌರವಿಸ ಲಾಗಿದೆ ಎಂದು ಅವರು ಹೇಳಿದರು.
ಮುಂದಿನ ಯೋಜನೆ
ಸಂಘದ ಕಾರ್ಯವ್ಯಾಪ್ತಿಯ ನಿಂತಿಕಲ್ ಮತ್ತು ನೆಲ್ಯಾಡಿಯಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಆಡಳಿತ ಮಂಡಳಿಯು ಈಗಾಗಲೇ ಕೆಲಸವನ್ನು ಆರಂಭಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರೂ.100 ಕೋಟಿ ಠೇವಣಿ ಸಂಗ್ರಹಿಸಿ ರೂ. 80 ಕೋಟಿಯಷ್ಟು ಸಾಲವನ್ನು ವಿತರಿಸಲು ಸಂಘದ ಆಡಳಿತ ಮಂಡಳಿಯು ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದೆ ಹಾಗೂ ಪ್ರತೀ ಶಾಖೆಗಳಲ್ಲಿ ಗ್ರಾಹಕರ ಸಭೆಯನ್ನು ಕೂಡಾ ನಡೆಸಲು ತೀರ್ಮಾನಿಸಿರುತ್ತೇವೆ. ಜೊತೆಗೆ ಸಂಘದ 2ನೇ ಮಹಡಿಯಲ್ಲಿ ವಿಶಾಲವಾದ ಸಭಾಂಗಣವನ್ನು ನಿರ್ಮಿಸಲು ಕೂಡಾ ಚಿಂತನೆಯನ್ನು ನಡೆಸಿರುತ್ತೇವೆ ಎಂದರು.
ಉಪಾಧ್ಯಕ್ಷ ಪಿ.ಎಸ್. ಗಂಗಾಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ನಿರ್ದೇಶಕರುಗಳಾದ ಪಿ.ಸಿ. ಜಯರಾಮ್, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ. ಸದಾನಂದ, ಲಕ್ಷ್ಮೀನಾರಾಯಣ ನಡ್ಕ, ಮೋಹನ್ ರಾಮ್ ಸುಳ್ಳಿ, ದಾಮೋದರ ಎನ್.ಎಸ್., ದಿನೇಶ್ ಮಡಪ್ಪಾಡಿ, ನಳಿನಿ ಸೂರಯ್ಯ, ಲತಾ ಎಸ್. ಮಾವಾಜಿ, ಜಯಲಲಿತಾ ಕೆ.ಎಸ್. ಉಪಸ್ಥಿತರಿದ್ದರು.
ಸಂಘದ ಮಡಿಕೇರಿ, ಕುಶಾಲನಗರ, ಮೈಸೂರು ಸೇರಿದಂತೆ ಹನ್ನೊಂದು ಶಾಖೆಗಳ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಸದಸ್ಯರುಗಳಿಗೆ ವಾಹನದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.