ಗೋಣಿಕೊಪ್ಪಲು, ಸೆ. 21: ಕಿತ್ತಳೆ, ದ್ರಾಕ್ಷಿ, ನಿಂಬೆ, ಮಾವು ಮತ್ತು ಪೈನ್ಯಾಪಲ್ ಹಣ್ಣಿನ ಉತ್ಪನ್ನ ಮತ್ತು ಮಾರಾಟದಿಂದ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ ವಾರ್ಷಿಕ ರೂ. 31 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿ ಲಾಭದಾಯಕ ಹಾದಿಯಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಅರುಣ್‍ಮಾಚಯ್ಯ ತಿಳಿಸಿದ್ದಾರೆ. ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 77ನೇ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರವನ್ನು ಮಂಡಿಸಿದರು.
ನಮ್ಮ ಸಂಘವು ಕೂರ್ಗ್ ಕನ್‍ಸೋಲಿಡೇಟ್ ಕಮೋಡಿಟೀ ಐನ್‍ಮನೆ ಹಾಗೂ ಪತಾಯಾ ಕೂರ್ಗ್ ಸ್ಟೋರ್ಸ್ ಬ್ರಾಂಡ್‍ನಲ್ಲಿ ವಿವಿಧ ರೀತಿಯ ಜೇನಿನ ಉತ್ಪನ್ನ ಮತ್ತು ನೆಲ್ಲಿಕಾಯಿ, ಆರೆಂಜ್, ಬೈಂಬಳೆ, ಕೈಹುಳಿಗಳಿಂದ (ಮೊದಲ ಪುಟದಿಂದ) ತಯಾರಿಸಿದ ಉಪ್ಪಿನಕಾಯಿ ಉತ್ಪನ್ನಗಳಿಂದ 30 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ 4 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿಕೊಂಡಿದ್ದು, ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಹಣ್ಣಿನ ಮಂಡಿಯಿಂದ 1 ಕೋಟಿ 20 ಲಕ್ಷ ಹಣ್ಣಿನ ವ್ಯಾಪಾರ ನಡೆಸಿದ್ದು, 10 ಲಕ್ಷ 20 ಸಾವಿರ ಆದಾಯವನ್ನು ಯಾವದೇ ಖರ್ಚುಗಳಿಲ್ಲದೆ ಪಡೆದುಕೊಂಡಿದ್ದೇವೆ ಎಂದರು.
ಬೆಂಗಳೂರಿನ ಸಿಂಗನ ಅಗ್ರಹಾರ ಎಪಿಎಂಸಿ ಯಾರ್ಡಿನಲ್ಲಿ 60 ಲಕ್ಷ ಹಣ್ಣಿನ ವ್ಯಾಪಾರ ನಡೆಸಿದ್ದು, ಇದರಿಂದ 6 ಲಕ್ಷ ಆದಾಯ ನೇರವಾಗಿ ಗಳಿಸಿದ್ದೇವೆ. ಅಲ್ಲದೇ ಮಡಿಕೇರಿ ಕಾಫಿ ಕೃಪ ಕಟ್ಟಡದ ಮಳಿಗೆಯಲ್ಲಿ 1.5 ಲಕ್ಷ ವ್ಯಾಪಾರ ವಹಿವಾಟು ನಡೆಸಿದ್ದೇವೆ. ಇದರೊಂದಿಗೆ ಸಂಘದ ಕಾಫಿ ಮತ್ತು ತಾಳೆ ತೋಟದಲ್ಲಿ 1 ಲಕ್ಷ ಆದಾಯ ಗಳಿಸಿದ್ದು, ಮುಂದಿನ ವರ್ಷಕ್ಕೂ ಹೆಚ್ಚಿನ ಫಸಲಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಸೆಸ್‍ಲಾಂಗ್ ಟ್ರೇಡರ್ಸ್ ಕಂಪೆನಿಯಿಂದ ಸುಮಾರು 1200 ಟನ್ ಮೂರು ಕೋಟಿಗೂ ಮೌಲ್ಯದ ಎಲೋಪಿನ್ ಮೆಣಸಿನಕಾಯಿಗೆ ಬೇಡಿಕೆ ಬಂದಿದೆ. ಬೇಡಿಕೆ ಪ್ರಕಾರ 200 ಟನ್ ಅಂದರೆ 50 ಲಕ್ಷ ಮೌಲ್ಯದ ಮೆಣಸನ್ನು ಬೆಳೆಸುವ ಸಲುವಾಗಿ ಹಾಸನ, ಅರಕಲಗೋಡು, ಹೊಳೆನರಸೀಪುರ ಮುಂತಾದ ಸ್ಥಳಗಳಲ್ಲಿ 50 ಏಕರೆ ಜಾಗಗಳಲ್ಲಿ ಎಲೋಪಿನ್ ಬೆಳೆಯಲು ಸಸಿ ನೀಡಲಾಗಿದೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿಗೆ 1000 ಟನ್ 2.50 ಕೋಟಿ ಮೌಲ್ಯದ ಎಲೋಪಿನ್ ಮೆಣಸನ್ನು ಉತ್ಪಾದಿಸಲು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಸಂಘಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ ಇದಕ್ಕೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಬೆಂಗಳೂರಿನ ಮಲ್ಲೇಶ್ವರಂ ಸಹಕಾರ ಸೌಧ ಸಂಕೀರ್ಣದಲ್ಲಿ ಸರ್ಕಾರದಿಂದ ಮಳಿಗೆ ಮಂಜೂರಾಗಿದ್ದು, ಸದ್ಯದಲ್ಲೇ ಸಂಘದ ವತಿಯಿಂದ ವ್ಯಾಪಾರ ವಹಿವಾಟು ನಡೆಸಲಾಗುವದು.
ನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪಿಸಿ ಸುಮಾರು 10 ಲಕ್ಷ ವೆಚ್ಚಮಾಡಲಾಗಿದೆ. ಇದರಿಂದ ಮುಂದಿನ ಸಾಲಿನಲ್ಲಿ ಹೆಚ್ಚಿನ ಆದಾಯ ಗಳಿಸುವ ಬಗ್ಗೆ ಚಿಂತನೆ ಹರಿಸಲಾಗಿದೆ. ನೀರಿನ ಘಟಕದಿಂದ ತಯಾರಾಗುವ ನೀರನ್ನು ಶುಭ ಸಮಾರಂಭಗಳಿಗೆ ವಿತರಿಸಿ ಸಂಘದ ಆದಾಯ ಕ್ರೋಢೀಕರಣಕ್ಕೆ ಶ್ರಮಿಸಲಾಗುವದು. ಸೋಡಾ ಮತ್ತು ತಂಪುಪಾನೀಯಗಳನ್ನು ತಯಾರಿಸಲು ಕ್ರಮಕೈಗೊಂಡಿದ್ದು, ಗೋಣಿಕೊಪ್ಪಲು ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಸೋಡಾ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಮುಂದಿನ ವಾರ್ಷಿಕದಲ್ಲಿ ಹೆಚ್ಚಿನ ಆದಾಯ ಗಳಿಸಲಾಗುತ್ತದೆ ಎಂದು ಅರುಣ್ ಮಾಚಯ್ಯ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ನಿರ್ದೇಶಕರುಗಳಾದ ಎಸ್.ಎಸ್. ಸುರೇಶ್, ಎಸ್. ಎಂ. ವಿಶ್ವನಾಥ್, ಸಿ.ಎಂ. ಸೋಮಣ್ಣ, ಸುಮಿ ಸುಬ್ಬಯ್ಯ, ಶೋಭ ಕುಟ್ಟಪ್ಪ, ಸುನೀಲ್ ಮಾದಪ್ಪ, ಕೆ.ಯು ಪೂಣಚ್ಚ ಮತ್ತು ಸಂಘದ ವ್ಯವಸ್ಥಾಪಕ ಜೆ.ವಿ. ಹೇಮಂತ್‍ಕುಮಾರ್ ಉಪಸ್ಥಿತರಿದ್ದರು.