ಗೋಣಿಕೊಪ್ಪಲು, ಸೆ. 21: ವೀರಾಜಪೇಟೆ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಬಾಳೆಲೆಯಲ್ಲಿ ಶುಕ್ರವಾರ ಆರಂಭಗೊಂಡಿತು.

ಇಲ್ಲಿನ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆರಂಭಗೊಂಡ ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೆಂಗಡ ಮಹೇಶ್ ಕುಮಾರ್ ವಾಲಿಬಾಲ್ ಸರ್ವಿಸ್ ಮಾಡುವದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿದರು. ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ.ಬಿ. ರಾಜ, ಕೆ.ಎ. ಉದಯ ಉತ್ತಪ್ಪ, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕಾರ್ಯದರ್ಶಿ ಪೋಡಮಾಡ ಮೋಹನ್, ನಿರ್ದೇಶÀಕ ಅಡ್ಡೇಂಗಡ ಅರುಣ, ಮಾಚಂಗಡ ಸುಜಾ ಪೂಣಚ್ಚ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹಾಜರಿದ್ದರು.

ಬಾಲಕಿಯರ ವಾಲಿಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ತಂಡ ಶ್ರೀಮಂಗಲ ಪಿಯು ಕಾಲೇಜನ್ನು ಮಣಿಸಿತು.

ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ವೀರಾಜಪೇಟೆ ಬಾಲಕಿಯರ ತಂಡ ಗೆಲವು ಸಾಧಿಸಿತು. ಬಾಲಕರ ವಿಭಾಗದಲ್ಲಿ ಅರುವತ್ತೊಕ್ಕಲು ಸರ್ವದೈವತಾ ತಂಡ ಜಯಗಳಿಸಿತು. ಜಿಲ್ಲಾಮಟ್ಟದ ವಾಲಿಬಾಲ್ ಟೂರ್ನಿ ಸೋಮವಾರಪೇಟೆ ತಾಲೂಕಿನ ಕೂಡಿಗೆಯಲ್ಲಿ ತಾ. 24 ರಂದು ನಡೆಯಲಿದೆ

-ಎನ್.ಎನ್. ದಿನೇಶ್