ಮಡಿಕೇರಿ, ಸೆ. 20: ಮಡಿಕೇರಿ ನಗರಸಭೆಯ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ‘ಶಕ್ತಿ’ ಮತ್ತೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಿತು.
ಇಂದು ಅವರ ಕಚೇರಿಯಲ್ಲಿ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಹಾಗೂ ಸಂಪಾದಕ ಜಿ. ಚಿದ್ವಿಲಾಸ್ ಇವರುಗಳು ಭೇಟಿ ಮಾಡಿ ದಾಖಲಾತಿಗಳ ಸಹಿತ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ವಿವರಿಸಿದರು. ಜಿಲ್ಲಾಧಿಕಾರಿಗಳು ನಗರಸಭಾ ಆಯುಕ್ತರನ್ನು ಸಂಪರ್ಕಿಸಿದರಾದರೂ ಅವರು ಲಭ್ಯವಿರಲಿಲ್ಲ. ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಇಂಜಿನಿಯರ್ ಎನ್.ಪಿ. ಹೇಮಕುಮಾರ್ ಅವರನ್ನು ಕರೆಯಿಸಿ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಸೂಚಿಸಿದರು. ಒಂದು ವಾರದೊಳಗೆ ಪರಿಹಾರ ಒದಗಿಸಬೇಕೆಂದೂ ನಿರ್ದೇಶಿಸಿದರು.ತುರ್ತು ಸ್ಪಂದಿಸಿದ ಅಧಿಕಾರಿ ಹೇಮಕುಮಾರ್ ಅವರು ಬೆಂಗಳೂರಿನ ಕೇಂದ್ರ ಕಚೇರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಅವ್ಯವಸ್ಥೆ ಬಗ್ಗೆ ವಿವರಿಸಿದರು. 2005ರ ದರದ ಬದಲು 2018ರ ದರವನ್ನು ಸಾಫ್ಟ್‍ವೇರ್‍ನಲ್ಲಿ ಅಳವಡಿಸಿರುವದರಿಂದ ಸಮಸ್ಯೆ ಉದ್ಭವವಾಗಿದ್ದು, ದರ ಬದಲಾಯಿಸಬೇಕೆಂದು ಒತ್ತಾಯಿಸಿದರು. ನಗರಸಭೆಯಿಂದ ಪತ್ರ ಕಳುಹಿಸಿದಲ್ಲಿ ಮಡಿಕೇರಿಯಲ್ಲೇ ಕಂಪ್ಯೂಟರ್‍ನಲ್ಲಿ ದರ ಬದಲಾಯಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡುವದಾಗಿ ಅಲ್ಲಿನ ಅಧಿಕಾರಿಗಳು ಭರವಸೆ ನೀಡಿದರು.
ಒಂದು ವಾರದೊಳಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಸಮಸ್ಯೆ ಬಗೆಹರಿಯಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.