ವಿಶೇಷ ವರದಿ : ಕೆ.ಕೆ.ನಾಗರಾಜಶೆಟ್ಟಿ ಕೂಡಿಗೆ, ಸೆ. 20 : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ಜಿಲ್ಲಾ ರೇಷ್ಮೆ ಇಲಾಖೆಯ ಕಛೇರಿ ಮಡಿಕೇರಿಯಲ್ಲಿದ್ದು, ರೇಷ್ಮೆ ಕೃಷಿ ಕ್ಷೇತ್ರವು ಕೂಡಿಗೆಯಲ್ಲಿದೆ. ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಕಚೇರಿಯಿದ್ದು, ಇಲಾಖೆಯ ಮುಖ್ಯವಾದ ಅಧಿಕಾರಿಗಳ ಹುದ್ದೆ ಖಾಲಿ ಖಾಲಿ. ಜಿಲ್ಲಾ ಕೇಂದ್ರದಲ್ಲಿ ಮುಖ್ಯವಾಗಿ ಇರಬೇಕಾದ ರೇಷ್ಮೆ ಉಪನಿರ್ದೇಶಕರ ಹುದ್ದೆ ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ರೇಷ್ಮೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಅಧಿಕಾರಿಯಿದ್ದು, ಈ ಅಧಿಕಾರಿಯೂ ಜಿಲ್ಲೆಯ ಪ್ರಬಾರ ಹೊರತು ನೇಮಕಾತಿಯವರಲ್ಲ. ಈಗಿರುವ ಸಹಾಯಕ ನಿರ್ದೇಶಕರು ಮೈಸೂರಿನ ಕೇಂದ್ರ ಸ್ಥಾನದ ಸಹಾಯಕ ನಿರ್ದೇಶಕರಾಗಿದ್ದಾರೆ.ಜಿಲ್ಲೆಯಲ್ಲಿ 28 ರೇಷ್ಮೆ ಬೆಳೆಗಾರರನ್ನು ಸೋಮವಾರಪೇಟೆ ತಾಲೂಕು ಹೊಂದಿದ್ದು, ಈ ವ್ಯಾಪ್ತಿಗೆ ಮೂರು ತಾಂತ್ರಿಕ ಕೇಂದ್ರ, ಮೂರು ರೇಷ್ಮೆ ಸೇವಾ ಕೇಂದ್ರಗಳು ಬರುತ್ತವೆ. ಇವುಗಳಲ್ಲಿ ಸೋಮವಾರಪೇಟೆ ವಿಸ್ತರಣಾ ಕೇಂದ್ರ ಮತ್ತು ಕೊಡ್ಲಿಪೇಟೆ ವಿಸ್ತರಣಾ ಕೇಂದ್ರಗಳಾಗಿವೆ. ಈ ವಿಸ್ತರಣಾ ಕೇಂದ್ರಗಳ ಮೂಲಕ ರೈತರುಗಳಿಗೆ ರೇಷ್ಮೆ ಬೆಳೆಯನ್ನು ಬೆಳೆಯಲು ತರಬೇತಿ ಮತ್ತು ಬೆಳೆಗೆ ತಗಲುವ ಸೋಂಕು ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವದು ಮುಖ್ಯವಾಗಿರುತ್ತದೆ. ಮಾಹಿತಿ ನೀಡುವ ಅಧಿಕಾರಿಗಳೇ ಇಲ್ಲದೆ, ಕಚೇರಿಗಳು ಪಾಳುಬಿದ್ದಂತಾಗಿದ್ದು, ರೇಷ್ಮೆ ಇಲಾಖೆಯ ಅಭಿವೃದ್ಧಿಯಂತೂ ಮರೀಚಿಕೆಯಾಗಿಯೇ ಉಳಿದಿದೆ.
ಆದರೆ, ಕಳೆದ ಹದಿನೈದು ವರ್ಷಗಳಿಂದ ಹದಿನೇಳು ಜನ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಇದ್ದ ಹದಿನೇಳು ಮಂದಿಯಲ್ಲಿ ಎಂಟು ಮಂದಿ ನಿವೃತ್ತಿ, 7 ಮಂದಿ ವರ್ಗಾವಣೆಯಾದ
(ಮೊದಲ ಪುಟದಿಂದ) ನಂತರ ಈಗಿರುವದು ಕೇವಲ ಇಬ್ಬರು ಅಧಿಕಾರಿಗಳು. ಈಗಿರುವ ಇಬ್ಬರು ಅಧಿಕಾರಿಗಳು ಹಿರಿಯ ರೇಷ್ಮೆ ನಿರೀಕ್ಷಕರ ಹುದ್ದೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಇದೀಗ 25 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈಗಿರುವ ಎರಡು ಹುದ್ದೆಗಳಲ್ಲಿ ಕೂಡಿಗೆಯ ಕೃಷಿ ರೇಷ್ಮೆ ಕ್ಷೇತ್ರದಲ್ಲಿ ರೇಷ್ಮೆ ನಿರೀಕ್ಷಕರು ಮತ್ತು ಜಿಲ್ಲಾ ಮಟ್ಟದ ರೇಷ್ಮೆ ನಿರೀಕ್ಷಕರು, ಸರಕಾರ ಸಿಬ್ಬಂದಿಗಳನ್ನು ನೇಮಕ ಮಾಡದೆ, ಬೇರೆ ಜಿಲ್ಲೆಗಳಿಂದ ಅಧಿಕಾರಿಗಳನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿದರೂ ಸಹ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಯುವ ರೈತರಿಗೆ ತರಬೇತಿ ನೀಡುವದಾದರೂ ಎಲ್ಲಿ ? ರೇಷ್ಮೆ ಬೆಳೆಯ ಅಭಿವೃದ್ಧಿ ಮಾಡುವ ದಾದರು ಹೇಗೆ? ಎಂಬದು ರೇಷ್ಮೆ ಬೆಳೆಗಾರರ ಕೊರಗು.
ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವದರಿಂದ ಮೂರು ತಾಲೂಕುಗಳಲ್ಲಿ ರೇಷ್ಮೆ ಬೆಳೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸೋಮವಾರಪೇಟೆ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಕೆಲವು ಭಾಗಗಳಲ್ಲಿ 25 ವರ್ಷಗಳಿಂದಲೂ ಆಯಾ ಭಾಗದ ರೈತರುಗಳು ಕಷ್ಟ-ನಷ್ಟಗಳ ನಡುವೆ ತಮ್ಮ ಜಮೀನುಗಳಲ್ಲಿ ಹಿಪ್ಪುನೇರಳೆ ಗಿಡಗಳನ್ನು ನೆಟ್ಟು ರೇಷ್ಮೆ ಮೊಟ್ಟೆಯನ್ನು ತಂದು ರೇಷ್ಮೆ ಬೆಳೆಯನ್ನು (ಗೂಡು) ಬೆಳೆದು ಮಾರಾಟ ಮಾಡುತ್ತಿದ್ದರು. ಆದರೆ ರೈತರುಗಳಿಗೆ ಉತ್ತೇಜನ ಮತ್ತು ತರಬೇತಿ ನೀಡಿ ಸೂಕ್ತ ಮಾಹಿತಿ ನೀಡಲು ಕಳೆದ 15 ವರ್ಷಗಳಿಂದ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡದೆ ಬರಿ ಮಾತಿಗಷ್ಟೆ ಉತ್ತೇಜನ ನೀಡುವಂತೆ ಹೇಳುತ್ತಾ ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಕಡಿಮೆಯಾಗುತ್ತಿದ್ದು, ರೇಷ್ಮೆ ಬೆಳೆಯುವ ರೈತರು ಕೂಡಾ ಕಡಿಮೆಯಾಗುತ್ತಿದ್ದಾರೆ. ರೈತರುಗಳು ತಮ್ಮ ಅಲ್ಪ ಜಮೀನಿನಲ್ಲಿ ಹಿಪ್ಪುನೇರಳೆ ಗಿಡಗಳನ್ನು ನೆಟ್ಟಿದ್ದನ್ನು ಕಿತ್ತು ತಮ್ಮ ಆರ್ಥಿಕ ಮೌಲ್ಯವನ್ನು ವೃದ್ಧಿಕೊಳ್ಳಲು ಬೇರೆ ವಾಣಿಜ್ಯ ಬೆಳೆಗಳನ್ನು ಅವಲಂಬಿಸುತ್ತಿದ್ದಾರೆ.
ರೇಷ್ಮೆ ಇಲಾಖೆಗೆ ಜಿಲ್ಲಾ ಮಟ್ಟದಿಂದ ಬಿಡುಗಡೆ ಆಗುವ 50,000 ರೂ ಹಣದಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ತರಬೇತಿ ನೀಡಲು ಮತ್ತು ಬೆಳೆಗಳಿಗೆ ತಗಲುವ ಸೋಂಕು ನಿರ್ವಹಣೆ ಔಷಧಿಗಳ ಖರೀದಿಗೆ ಉಪಯೋಗಿಸಲಾಗುವದು.
ಕಟ್ಟಡವನ್ನು ದಾನಗೈದರು!
ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಬೇಡಿಕೆ ಇದ್ದ ಕೂಡಿಗೆಯ ರೇಷ್ಮೆ ಬಿತ್ತನೆ ಕೋಟೆ (ರೇಷ್ಮೆಮೊಟ್ಟೆ) ರೇಷ್ಮೆ ಉತ್ಪಾದನಾ ಕೇಂದ್ರವು ಸಿಬ್ಬಂದಿಗಳಿಲ್ಲದೆ ಇದೀಗ ಮುಚ್ಚಲ್ಪಟ್ಟಿದೆ. ಕೂಡಿಗೆಯು ಅರೆಮಲೆನಾಡು ಪ್ರದೇಶವಾದ ಹಿನ್ನೆಲೆಯಲ್ಲಿ ಈ ಕೇಂದ್ರದ ರೇಷ್ಮೆ ಮೊಟ್ಟೆಗಳಿಗೆ ಕಳೆದ ಹತ್ತು ವರ್ಷಗಳಿಂದಲೂ ಭಾರಿ ಬೇಡಿಕೆ ಇದ್ದು, ರಾಜ್ಯದಲ್ಲಿಯೇ ರೇಷ್ಮೆ ನಾಡಾಗಿರುವ ರಾಮನಗರ ಜಿಲ್ಲೆ, ಹಾಸನ, ಚನ್ನಪಟ್ಟಣಗಳಿಂದಲೂ ರೈತರು ಬಂದು ರೇಷ್ಮೆ ಮೊಟ್ಟೆಗಳನ್ನು ಕೊಡಗು ಜಿಲ್ಲೆಯ ಕೂಡಿಗೆ ರೇಷ್ಮೆ ಬಿತ್ತನೆ ಕೋಟೆಯಿಂದ ತೆಗೆದುಕೊಂಡು ಹೋಗಿ ಉತ್ತಮವಾದ ರೇಷ್ಮೆ ಗೂಡುಗಳನ್ನು ಬೆಳೆಯುತ್ತಿದ್ದರು. ಇದರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಷ್ಮೆ ಮಾರುಕಟ್ಟೆಯು ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಸ್ಥಾಪನೆ ಗೊಂಡಿತ್ತು, ಆದರೆ ಆ ಮಾರುಕಟ್ಟೆ ಯೂ ಸಹ ಸ್ಥಗಿತಗೊಂಡು ಈ ಮಾರುಕಟ್ಟೆಯ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗೆ ನೀಡಲಾಗಿದೆ.
ಜಿಲ್ಲೆಯ ರೇಷ್ಮೆ ಕೃಷಿ ಕ್ಷೇತ್ರವಾದ ಕೂಡಿಗೆಯಲ್ಲಿ ಸರಕಾರದ ನಿರ್ಲಕ್ಷ್ಯದಿಂದ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕ ಇಲ್ಲದೆ, ಇದ್ದ 30 ಎಕರೆ ಪ್ರದೇಶದಲ್ಲಿ 10 ಎಕರೆ ಪ್ರದೇಶವನ್ನು ಮೊರಾರ್ಜಿ ವಸತಿ ಶಾಲೆಗೆ, 5 ಎಕರೆ ಪ್ರದೇಶವನ್ನು ಉಗ್ರಾಣ ನಿರ್ಮಾಣಕ್ಕೆ (ಎಫ್‍ಸಿಐ) ನೀಡಲಾಗಿದೆ. ಇನ್ನುಳಿದ 15 ಎಕರೆ ಪ್ರದೇಶದಲ್ಲಿ ಈಗಿರುವ ಓರ್ವ ಸಿಬ್ಬಂದಿ ದಿನಗೂಲಿಗಾಗಿ ನೌಕರರನ್ನು ಸೇರಿಸಿಕೊಂಡು ವಿ1 ತಳಿಯ ಆಧುನಿಕ ತಂತ್ರಜ್ಞಾನದಿಂದ 1 ಎಕರೆ ಪ್ರದೇಶಕ್ಕೆ ಹಿಪ್ಪುನೇರಳ ಗಿಡಗಳನ್ನು ನೆಟ್ಟು ಬೇಸಾಯ ಮಾಡುತ್ತಿದ್ದಾರೆ.
ಈ ಬೇಸಾಯವು ಉತ್ತಮ ವಾಗಿದ್ದು, ಹಿಪ್ಪ್ಪುನೇರಳೆ ಸೊಪ್ಪಿನಿಂದ ಬೇರೆ ಕೇಂದ್ರಗಳಿಂದ ರೇಷ್ಮೆ ಮೊಟ್ಟೆ ತಂದು ರೇಷ್ಮೆ ಗೂಡನ್ನು ಬೆಳೆಯಲು ಈಗಿರುವ ಅಧಿಕಾರಿ ಮುಂದಾಗಿದ್ದಾರೆ. ಇತ್ತೀಚಿನ ದಿನಗಲ್ಲಿ ರೇಷ್ಮೆ ಬೆಳೆಯು ವಾಣಿಜ್ಯ ಬೆಳೆಯ ಮಾದರಿಯಾಗಿದ್ದು, ಒಂದು ಕೆ.ಜಿ ರೇಷ್ಮೆ ಗೂಡಿಗೆ 1200 ರಿಂದ ರೂ 1500 ಬೆಲೆ ಇರುವದರಿಂದ ಇಂದಿನ ವಿದ್ಯಾವಂತ ಯುವ ರೈತರು ಮತ್ತು ಮಹಿಳಾ ರೈತರುಗಳು ರೇಷ್ಮೆ ಬೆಳೆಯತ್ತ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ತರಬೇತಿ ಪಡೆಯಲು ಕೂಡಿಗೆ ಕ್ಷೇತ್ರಕ್ಕೆ ಬರುತ್ತಿದ್ದರೂ ಸಹ ತರಬೇತಿ ನೀಡಲು ಅಧಿಕಾರಿ ಮತ್ತು ಸಿಬ್ಬಂದಿಗಳು ಇಲ್ಲದಂತಾಗಿದೆ. ರೇಷ್ಮೆ ಬೆಳೆ ವಾಣಿಜ್ಯ ಬೆಳೆಯಾದ್ದರಿಂದ ವಿದ್ಯಾವಂತ ನಿರುದ್ಯೋಗಿ ಯುವಕರು ರೇಷ್ಮೆ ಬೆಳೆಯನ್ನು ಬೆಳೆಯುವತ್ತ ಮುಂದಾಗಿದ್ದಾರೆ. ಆದ್ದರಿಂದ ಸರಕಾರ ಜಿಲ್ಲಾ ಪಂಚಾಯ್ತಿ ಮೂಲಕವಾದರೂ ಗುತ್ತಿಗೆ ಆಧಾರದ ಮೂಲಕ ಸಿಬ್ಬಂದಿಗಳನ್ನು ನೇಮಕ ಮಾಡಿ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಬೆಳೆಯ ಬಗ್ಗೆ ತರಬೇತಿ ನೀಡಲು ಮುಂದಾಗಬೇಕು.
ಈಗಾಗಲೇ ಸರ್ಕಾರವು ನಿಗದಿಪಡಿಸಿದಂತೆ ಈ ರೇಷ್ಮೆ ಕೃಷಿ ಕ್ಷೇತ್ರದಿಂದ ರೂ. 50,000 ಮೊತ್ತದ ರೇಷ್ಮೆ ಗೂಡು ಉತ್ಪಾದನೆ ಮಾಡುವ ಗುರಿಯನ್ನು ಹೊಂದಲು ಈಗಿರುವ ಕ್ಷೇತ್ರದ ಆವರಣದಲ್ಲಿ ಹೊಸ ಹಿಪ್ಪುನೇರಳೆ ಗಿಡಗಳನ್ನು ನೆಡುವ ಮೂಲಕ ಬೇಸಾಯಕ್ಕೆ ತೊಡಗಿದ್ದಾರೆ. ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳ ರೇಷ್ಮೆ ಇಲಾಖೆಗೆ ಹಣ ಬಿಡುಗಡೆ ಮಾಡುವಂತೆ ಕೊಡಗು ಜಿಲ್ಲೆಗೂ ಹಣ ಬಿಡುಗಡೆ ಮಾಡುತ್ತಿದ್ದರೂ, ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದೇಟು ಹಾಕುತ್ತಿದೆ. ಸಿಬ್ಬಂದಿಗಳು ಇಲ್ಲದ ಹಿನ್ನೆಲೆಯಲ್ಲಿ ಈಗಿರುವ ಸೋಮವಾರಪೇಟೆ ತಾಲೂಕಿನ 28 ರೈತರಿಗೆ ಸರ್ಕಾರದಿಂದ ಸಿಗಬೇಕಾದ ರಿಯಾಯಿತಿಯ ಸೌಲಭ್ಯಗಳನ್ನು ಪಡೆಯಲು ಭಾರಿ ಕಷ್ಟವಾಗುತ್ತಿದೆ.
ರೈತರಿಗೆ ರೇಷ್ಮೆ ಬೆಳೆಯು ವರ್ಷದಲ್ಲಿ ನಾಲ್ಕು ಬಾರಿ ಬೇಸಾಯ ಮಾಡುವ ಅನುಕೂಲವಿದ್ದು, ಹಿಪ್ಪನೇರಳೆ ಮತ್ತು ಗೂಡು ಸಾಕಾಣಿಕಾ ಮನೆ, ಗೂಡು ಸಾಕಾಣಿಕೆ ಮಾಡಲು ಬೇಕಾಗುವ ಸಾಮಗ್ರಿಗಳಿಗೆ ಸಹಾಯದ ಅನುಕೂಲದ ಯೋಜನೆ ತಲಪಲು ಬಹುದೂರವಾಗಿದೆ. ಈಗಿರುವ ಅಲ್ಪ ಪ್ರಮಾಣದ ರೇಷ್ಮೆ ರೈತರು ರೇಷ್ಮೆ ಬೆಳೆಗೆ ಉತ್ತಮ ಬೆಲೆ ಇರುವದರಿಂದ ಕಷ್ಟ ನಷ್ಟದಲ್ಲಿ ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಕಾವೇರಿ ರೇಷ್ಮೆ ಸಹಕಾರ ಸಂಘವನ್ನು ರಚಿಸಿಕೊಂಡಿದ್ದು, ಇದರ ಮುಖೇನ ತಮ್ಮ ಬೇಡಿಕೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಹಾಗೂ ರಾಜ್ಯಮಟ್ಟದ ಅಧಿಕಾರಿಗಳಿಗೂ ತಲಪಿಸಿದ್ದಾರೆ. ಆದರೆ, ಇದುವರೆಗೂ ಸಮರ್ಪಕವಾದ ಸ್ಪಂದನೆ ದೊರೆತಿಲ್ಲ.
ಈ ವ್ಯವಸ್ಥೆಗಳನ್ನು ಸರಿಪಡಿಸ ದಿದ್ದಲ್ಲಿ ಈಗಿರುವ ಇಬ್ಬರು ಸಿಬ್ಬಂದಿ ಗಳು ನಿವೃತ್ತಿಗೊಂಡು ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ ಮುಚ್ಚಲ್ಪಟ್ಟು ಕೂಡಿಗೆ ಯಲ್ಲಿರುವ 15 ಎಕರೆ ಪ್ರದೇಶದ ರೇಷ್ಮೆ ಇಲಾಖೆಯ ಜಾಗವು ಬೇರೆ ಇಲಾಖೆಗಳ ಪಾಲಾಗುವ ಬದಲು ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಉಪಯೋಗಕ್ಕೆ ಬರುವಂತಾಗಬೇಕು. ಸಿಬ್ಬಂದಿಗಳನ್ನು ನೇಮಿಸಲು ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು ಮುಂದಾಗಿ ಕೊಡಗು ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರನ್ನು ಹಾಗೂ ರೇಷ್ಮೆ ಇಲಾಖೆಯನ್ನು ಅಭಿವೃದ್ಧಿಪಡಿಸಲು ಸಹಕಾರಿಗಳಾಗಬೇಕು ಎಂಬದು ರೇಷ್ಮೆ ಬೆಳೆಗಾರರ ಒತ್ತಾಯವಾಗಿದೆ.