ಕೂಡಿಗೆ, ಸೆ. 20 : ವ್ಯವಸಾಯ ಮಾಡಲು ಬ್ಯಾಂಕ್‍ನಿಂದ ಮತ್ತು ಕೈ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಸಾಲಬಾಧೆಯಿಂದ ಕೀಟನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್(59) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
(ಮೊದಲ ಪುಟದಿಂದ) ಮಂಜುನಾಥ್ ಚಿನ್ನೇನಹಳ್ಳಿ ಗ್ರಾಮದಲ್ಲಿ ಏಳು ಎಕರೆ ಜಮೀನಿನಲ್ಲಿ ಶುಂಠಿ ಮತ್ತು ಜೋಳ ಕೃಷಿ ಮಾಡಿದ್ದು, ಅದಕ್ಕಾಗಿ ಬ್ಯಾಂಕ್‍ನಲ್ಲಿ ಮತ್ತು ಕೈಸಾಲ ಮಾಡಿಕೊಂಡು, ಬೆಳೆಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಲು ತೀರ್ಮಾನಿಸಿದ್ದರು. ಆದರೆ ಸಾಲ ಮಾಡಿ ಬೆಳೆದ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿ, ಶುಂಠಿ ಕೊಯ್ಲು ಮಾಡಿ ಮಾರಾಟ ಮಾಡಿದಾಗ ಬಹಳ ನಷ್ಟವಾಗಿ ಆರ್ಥಿಕವಾಗಿ ತೊಂದರೆಯಲ್ಲಿ ಸಿಲುಕಿದ್ದ ರೈತ ಮಂಜುನಾಥ್ ಕೀಟನಾಶಕ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಔಷಧಿ ಸೇವಿಸಿ ಅಸ್ವಸ್ಥರಾಗಿದ್ದ ಮಂಜುನಾಥ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಪ್ರಕರಣವು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.