ಮಡಿಕೇರಿ, ಸೆ. 20: ಪ್ರಯಾಣಿಕರನ್ನು ಕರೆದೊ ಯುತ್ತಿದ್ದ ಆಟೋ ರಿಕ್ಷಾ ವೊಂದಕ್ಕೆ ಕಾರೊಂದು ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ (ಮೊದಲ ಪುಟದಿಂದ) ಮಹಿಳೆ ಹಾಗೂ ಚಾಲಕನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ. ತಾ. 17 ರಂದು ಮನೋಜ್‍ಕುಮಾರ್ ಎಂಬವರಿಗೆ ಸೇರಿದ ಆಟೋರಿಕ್ಷಾದಲ್ಲಿ (ಕೆ.ಎ. 12 ಎ. 1714) ನಿರ್ಮಲ ಶ್ಯಾಮ್‍ರಾಜ್ ಹಾಗೂ ಪುತ್ರ ಆಶ್ರಿತ್ ಶ್ಮಾಮ್‍ರಾಜ್ ಪ್ರಯಾಣಿಸುತ್ತಿದ್ದ ಸಂದರ್ಭ ನಗರದ ಜೂನಿಯರ್ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಎದುರುಗಡೆಯಿಂದ ನುಗ್ಗಿದ ಕಾರು (ಕೆ.ಎ. 12 ಪಿ. 2878) ಆಟೋಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಆಟೋ ರಿಕ್ಷಾ ರಸ್ತೆ ಬದಿಯ ದಿಬ್ಬದಿಂದ ಕೆಳಕ್ಕುರುಳಿದೆ. ಆಟೋದಲ್ಲಿದ್ದ ನಿರ್ಮಲ ಅವರ ಕಾಲು ಮುರಿದು ಮೂಳೆ ಹೊರಗೆ ಬಂದಿದೆ. ಚಾಲಕ ಮನೋಜ್‍ಗೂ ಗಾಯವಾಗಿದೆ. ಕಾರು ಚಾಲಕ, ಬ್ಯಾಂಕ್‍ಗಳಿಗೆ ಹಣ ರವಾನೆ ಮಾಡುವ ವಾಹನದ ಚಾಲಕನಾಗಿರುವ ಶಿವರಾಂ ಎಂಬಾತ ಕಾರಿನಿಂದಿಳಿದು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಮನೋಜ್ ನೀಡಿದ ದೂರಿನನ್ವಯ ಅಪಘಾತ ಪಡಿಸಿ ಪರಾರಿಯಾದ ಕುರಿತು ಪ್ರಕರಣ ದಾಖಲಿಸಿದ್ದಾರೆ. ಕಾಲು ಮುರಿತಕ್ಕೊಳಗಾಗಿರುವ ನಿರ್ಮಲ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.