ಮಡಿಕೇರಿ, ಸೆ. 20: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿಯೊಬ್ಬಳು ಕ್ಷುಲ್ಲಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ ನಿವಾಸಿ, ಎಂ. ಬಾಲಕೃಷ್ಣ ಎಂಬವರ ಪುತ್ರಿ ಮೇಘನಾ (20) ಮೃತೆ ವಿದ್ಯಾರ್ಥಿನಿ. (ಮೊದಲ ಪುಟದಿಂದ) ಈಕೆ ನಿನ್ನೆ ರಾತ್ರಿ ಮನೆಯಲ್ಲಿ ತಾಯಿಯ ಬಳಿ ಪುಸ್ತಕಕ್ಕೆಂದು ರೂ. 1,500 ಹಣ ಕೇಳಿದ್ದು; ತಾಯಿ ಸುಮತಿ ಅಷ್ಟು ಮೊತ್ತ ಇಲ್ಲವೆಂದು; ಬೆಳಿಗ್ಗೆ ಬೇರೆಯವರ ಬಳಿ ಹೊಂದಿಸಿ ಕೊಡುವದಾಗಿ ಸಮಾಧಾನ ಪಡಿಸಿದ್ದರೆನ್ನಲಾಗಿದೆ.ಅಲ್ಲದೆ ಊಟಕ್ಕೆ ಮಾಂಸದ ಸಾರು ಬೇಡಿಕೆ ಇರಿಸಿರುವ ಮೇಘನಾ, ರಾತ್ರಿ ಈ ಹೊತ್ತಿನಲ್ಲಿ ಎಲ್ಲಿಂದ ತರುವದು ಎಂದು ತಾಯಿ ಬುದ್ದಿ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯಿಂದ ಹೊರಗೆ ಕೋಣೆಯಲ್ಲಿ ಇರಿಸಿದ್ದ ಕ್ರಿಮಿನಾಶಕ ಸೇವಿಸಿದ್ದು; ಆ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.ಶ್ರೀಮಂಗಲದಲ್ಲಿ ತುರ್ತು ಚಿಕಿತ್ಸೆ ಬಳಿಕ; ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸಿದ್ದು; ಅಲ್ಲಿಂದ ಮಡಿಕೇರಿಗೆ ಕರೆದೊಯ್ಯವಷ್ಟರಲ್ಲಿ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಗಿ ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.