ಮಡಿಕೇರಿ, ಸೆ. 15: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ವಿಚಾರಧಾರೆ ಕುರಿತು ವಿವಿಧ ಸ್ಪರ್ಧಾ ಕಾರ್ಯಕ್ರಮವು ತಾ. 24 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸರ್ವೋದಯ ಸಮಿತಿ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ (ಗಾಂಧೀಜಿ ಅವರ ಸತ್ಯ, ಅಹಿಂಸೆ, ಸರಳತೆ ಅಥವಾ ಗ್ರಾಮ ಸ್ವರಾಜ್ಯ- ರಾಮ ರಾಜ್ಯದ ಕಲ್ಪನೆ), ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ (ಗ್ರಾಮೋದ್ಧಾರ/ ದೇಶೋದ್ಧಾರ ಅಥವಾ ವ್ಯಕ್ತ್ತಿ ಹಾಗೂ ಶಕ್ತಿಯಾಗಿ ಗಾಂಧೀಜಿ), ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೆಯೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರು, ಶಾಲೆಯ ಹೆಸರು, ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರ ದೂರವಾಣಿ ಸಂಖ್ಯೆ ಮತ್ತಿತರ ವಿಳಾಸ ಒಳಗೊಂಡ ಮಾಹಿತಿಯನ್ನು ತಾ. 15 ರೊಳಗೆ ಸ್ಪರ್ಧೆಗಳ ಸಂಯೋಜಕರು ಹಾಗೂ ಶಿಕ್ಷಕರಾದ ವಿಲ್‍ಫ್ರೆಡ್ ಕ್ರಾಸ್ತಾ (9448773078), ರೇವತಿ ರಮೇಶ್ (9663254829) ಇವರಿಗೆ ತಲಪಿಸಬೇಕಿದೆ. ಸರ್ವೋದಯ ಸಮಿತಿ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್, ಸಮಿತಿ ಸದಸ್ಯರಾದ ಮುನೀರ್ ಅಹಮದ್, ಕೋಡಿ ಚಂದ್ರಶೇಖರ್, ಕೆ.ಟಿ. ಬೇಬಿ ಮ್ಯಾಥ್ಯೂ, ಸುರಯ್ಯಾ ಅಬ್ರಾರ್, ರೇವತಿ ರಮೇಶ್, ಲಿಯಾಕತ್ ಆಲಿ, ಚಂದ್ರು, ಯಶೋಧ, ವಿಲ್‍ಫ್ರೆಡ್ ಕ್ರಾಸ್ತಾ, ಪ್ರೇಮ ಕೃಷ್ಣಪ್ಪ, ಸ್ವರ್ಣಲತಾ ಇತರರು ಇದ್ದರು.