*ಸಿದ್ದಾಪುರ, ಸೆ. 15: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ. ಕಾಲೋನಿಯಲ್ಲಿ ಪ್ರವಾಹದಿಂದ ಮನೆ ಬಿರುಕು ಬಿಟ್ಟವರಿಗೆ ಇತ್ತೀಚೆಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರೂ. 25,000 ಪರಿಹಾರ ನೀಡಿದ್ದು ಅದರಲ್ಲಿ ಫಲಾನುಭವಿಗಳಲ್ಲದವರಿಗೂ ಗಾ.ಪಂ. ಪರಿಹಾರ ನೀಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಹಾಗೂ ಪಿಡಿಓ ಅನಿಲ್ ಅವರುಗಳು ನಿಜವಾಗಿ ಮನೆ ಬಿರುಕು ಬಿಟ್ಟವರಿಗೆ ಪರಿಹಾರ ನೀಡದೆ ಉತ್ತಮ ರೀತಿಯಲ್ಲಿರುವ ಮನೆಯವರಿಗೆ ಇದರ ಪ್ರಯೋಜನ ಪಡೆದುಕೊಳ್ಳಲು ಸಹಕರಿಸಿದ್ದಾರೆ. ನೆಲ್ಲಿಹುದಿಕೇರಿ ಹೊಳೆಕರೆ ಪೈಸಾರಿ ನಿವಾಸಿಗಳಿಗೆ ಪರಿಹಾರದಲ್ಲಿ ತಾರತಮ್ಯ ಆಗಲಿಲ್ಲ. ಎಂ.ಜಿ. ಕಾಲೋನಿಗಳಲ್ಲಿ ನಿಜವಾಗಿ ಮನೆ ಬಿರುಕು ಬಿಟ್ಟು ತೊಂದರೆಯಲ್ಲಿರುವವರಿಗೆ ಪರಿಹಾರ ಸಿಗದೆ ಉಳ್ಳವರಿಗೆ ಲಭಿಸಿದೆ. ಈ ಬಗ್ಗೆ ತನಿಖೆಯಾಗಬೇಕು. ಮನೆಗೆ ಹಾನಿ ಯಾಗದೆ ಚೆಕ್ ಪಡೆದುಕೊಂಡವರ ಚೆಕ್ ಅನ್ನು ವಾಪಾಸು ಪಡೆದು ಮನೆ ಭಾಗಶಃ ಬಿರುಕು ಬಿಟ್ಟವರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. - ಸುಧಿ