ಗೋಣಿಕೊಪ್ಪಲು, ಸೆ. 15: ಜಾನುವಾರುಗಳಲ್ಲಿ ಕಾಲು ಬಾಯಿ ಜ್ವರ ಮತ್ತು ಕಂದು ರೋಗಗಳ ನಿಯಂತ್ರಣ ಹಾಗೂ ಕೃತಕ ಗರ್ಭಧಾರಣ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಉತ್ತರ ಪ್ರದೇಶದ ಮಥುರಾದಿಂದ ನೇರ ಉದ್ಘಾಟನೆ ಮಾಡಿ ರೈತರ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲುವಿನಲ್ಲಿ ರೈತರಿಗಾಗಿ ಬಿತ್ತರಿಸಲಾಯಿತು.
ಕಾರ್ಯಕ್ರಮಕ್ಕೆ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮಾತನಾಡಿ, ರೈತರು ತಮ್ಮ ಜಾನುವಾರುಗಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸಿಕೊಂಡು ರೋಗಮುಕ್ತವಾಗಿಸಲು ಸಹಕಾರ ನೀಡಬೇಕೆಂದು ತಿಳಿಸಿದರು. ಮತ್ತೋರ್ವ ಅತಿಥಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಮಾತನಾಡಿ ಕಾಲು ಬಾಯಿ ಜ್ವರ ಮುಕ್ತವನ್ನಾಗಿಸಲು ರೈತರು ಹಾಗೂ ಪಶುವೈದ್ಯರು ಜಂಟಿಯಾಗಿ ಶ್ರಮಿಸಬೇಕೆಂದರು.
ಜಿಲ್ಲಾ ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎ.ಬಿ. ತಮ್ಮಯ್ಯ ಮಾತನಾಡುತ್ತಾ ಕಾಲುಬಾಯಿ ಜ್ವರ ಹಾಗೂ ಕಂದು ರೋಗದಿಂದ ಆರ್ಥಿಕತೆಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎಂದರು.
ಕೇಂದ್ರ ಮುಖ್ಯಸ್ಥ ಡಾ. ಸಾಜೂ ಜಾರ್ಜ್ ಮಾತನಾಡಿ ಪ್ರಧಾನ ಮಂತ್ರಿಗಳ ಕನಸಾದ ರೈತರ ಆದಾಯ ದ್ವಿಗುಣಗೊಳಿಸುವಿಕೆಯಲ್ಲಿ ಪಶು ಸಂಪತ್ತಿನ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ರೈತರು ರೋಗ ಮುಕ್ತ ಪಶು ಸಂಪತ್ತನ್ನು ಹೊಂದಲು ಕರೆ ನೀಡಿದರು. ಡಾ. ಸುನಿಲ್ ಪ್ರಾಸ್ತಾವಿಕ ನುಡಿಯಾಡಿದರು. ಡಾ.ಸುರೇಶ್ ಸ್ವಾಗತಿಸಿ, ನಿರೂಪಿಸಿದರು. 94 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಕಾರ್ಯಕ್ರಮದ ನಂತರ ಗೋಣಿಕೊಪ್ಪದ ರೈತರ 20 ಆಡುಗಳಿಗೆ ಹಾಗೂ 5 ಹಸುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ನೀಡಲಾಯಿತು. ಡಾ.ಚಂದ್ರಶೇಖರ್‍ರವರು ವಂದಿಸಿದರು.