ಕೂಡಿಗೆ, ಸೆ. 15: ಕಳೆದ ವರ್ಷ 2018ನೇ ಆಗಸ್ಟ್ ತಿಂಗಳಲ್ಲಿ ಆದ ಪ್ರಕೃತಿ ವಿಕೋಪದಿಂದ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರು ಹರಿದು ಕೂಡಿಗೆಯ ಸೇತುವೆ ಸಮೀಪವಿರುವ ಮೊದಲ ವಾರ್ಡಿನ 50 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ನಷ್ಟವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಗ್ರಾಮ ಪಂಚಾಯಿತಿ ಮುಖೇನ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಕೇವಲ 3500 ರೂಗಳನ್ನು ತಾತ್ಕಾಲಿಕ ಪರಿಹಾರವನ್ನು ನೀಡಲಾಗಿತ್ತು. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆಯ ನಂತರ ಹೆಚ್ಚು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಜರು ನಡೆಸಿ ತೆರಳಿದ್ದರು. ಇದರಂತೆ ಗ್ರಾಮ ಪಂಚಾಯಿತಿಯು ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸುವ ನಿಯಮಾನುಸಾರ ಎಲ್ಲಾ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಒದಗಿಸಲಾಗಿತ್ತು. ಆದರೂ ಇದುವರೆಗೂ ಪರಿಹಾರ ಬಂದಿಲ್ಲ. ವಿಕೋಪದ ಸಂದರ್ಭ ನಷ್ಟ ಅನುಭವಿಸಿದ ಗ್ರಾಮಸ್ಥರು ಈ ಹಿಂದೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯನ್ನು ನಡೆಸಿದ್ದರು.

ಅಲ್ಲದೇ ಲೋಕಸಭೆ ಚುನಾವಣೆ ಯನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು, ಚುನಾವಣೆ ಬಹಿಷ್ಕಾರ ಸಂದರ್ಭ ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚುನಾವಣೆಯನ್ನು ಬಹಿಷ್ಕರಿಸದಂತೆ ಮನವೊಲಿಸಿ, ಪರಿಹಾರವನ್ನು ನೀಡುವ ವ್ಯವಸ್ಥೆ ಮಾಡಲಾಗುವದು ಹಾಗೂ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ಒದಗಿಸುವದಾಗಿ ತಿಳಿಸಿದ್ದರು.

ಆದರೂ ಇದುವರೆಗೂ ಇದರ ಬಗ್ಗೆ ಯಾವದೇ ಕ್ರಮ ಕೈಗೊಳ್ಳದ ಹಿನ್ನೆಲೆ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಎರಡು ದಿನಗಳಲ್ಲಿ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡುವದಾಗಿ ಭರವಸೆ ನೀಡಿದರು. ನೆರೆ ಸಂತ್ರಸ್ತರು ನೆರೆ ಪರಿಹಾರಕ್ಕಾಗಿ ಇಷ್ಟೆಲ್ಲಾ ಹರಸಾಹಸಗಳನ್ನು ಮಾಡಿದರೂ ಈವರೆಗೆ ಒಂದು ನಯಾಪೈಸದ ಪ್ರಯೋಜನವಾಗಲಿಲ್ಲ. ನೆರೆ ಪರಿಹಾರ ದೊರಕಿಸಿ ಕೊಡುವದರಲ್ಲಿ ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯದ ಬಗ್ಗೆ ಹಾಗೂ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವದು ಎಂದು ನೆರೆ ಸಂತ್ರಸ್ತರಾದ ದೇವಕಿ ಗೋಪಾಲ್ ಕುಮಾರ್, ರಾಜಣ್ಣ, ಸುನಿತಾ, ಕೃಷ್ಣ, ರಾಮಚಂದ್ರ, ಸ್ವಾಮಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕುಟುಂಬಸ್ಥರು ತಿಳಿಸಿದ್ದಾರೆ.