ಸುಂಟಿಕೊಪ್ಪ, ಸೆ. 15: ಮನುಷ್ಯನ ಆಸೆಗಳಿಗೆ ಕೊನೆಯಿಲ್ಲ ಯಾವದೇ ವೃತ್ತಿಯಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೆಮ್ಮದಿ ಸಿಗದ ಈ ದಿನಗಳಲ್ಲಿ ಕಳೆದ 35 ವರ್ಷಗಳಿಂದ ಖಾಸಗಿ ಬಸ್ ಕ್ಲೀನರ್ ಆಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿರುವ ಅಪರೂಪ ವ್ಯಕ್ತಿಯೊಬ್ಬರನ್ನು ಕಾಣಬಹುದಾಗಿದೆ.

ಖಾಸಗಿ ಬಸ್ಸಿನ ಕ್ಲೀನರ್ ಆಗಿ ಒಂದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕೊಡ್ಲಿಪೇಟೆ ಮುನ್ಸಿಪಾಲಿಟಿ ಕಾಲೋನಿಯ ಕೆ.ಎಂ. ದೇವರಾಜು ಅವರ ವೃತ್ತಿ ಗೌರವ ಕಾರ್ಯಕ್ಷಮತೆಯನ್ನು ಮೆಚ್ಚಲೇಬೇಕು.

ಯಾವದೇ ವೃತ್ತಿ ಮುಖ್ಯ ಅಲ್ಲ ನಾವು ಆ ವೃತ್ತಿ ಯಲ್ಲಿ ತೊಡಗಿಸಿ ಕೊಳ್ಳುವ ಪರಿ, ವೃತ್ತಿ ಗೌರವವು ನಮಗೆ ಸಂತೃಪ್ತಿ ತಂದು ಕೊಡುತ್ತದೆ. ದೇವರಾಜು ಅವರಲ್ಲಿ ನೀವು 35 ವರ್ಷದಿಂದ ಬಸ್ಸಿನ ಕ್ಲೀನರ್ ಆಗಿಯೇ ಇದ್ದೀರಲ್ಲಾ, ಬಸ್ಸಿನ ಕಂಡಕ್ಟರ್ ಅಥವಾ ಚಾಲಕ ಆಗಬಹುದಿತ್ತಲ್ಲಾ ಎಂದು ಪ್ರಶ್ನಿಸಿದಾಗ ಏಕೆ ಸ್ವಾಮಿ ಈ ಕೆಲಸದಲ್ಲೇ ಸಂತ್ರಪ್ತನಾಗಿದ್ದೇನೆ ಎಂದು ಉತ್ತರಿಸುತ್ತಾರೆ. ಇವರ ಸಹೋದರನೂ ಖಾಸಗಿ ಬಸ್ಸಿನಲ್ಲಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದಾರೆ.

ದೇವರಾಜ ಬಸ್ಸಿನ ಯಾವದೇ ತಾಂತ್ರಿಕ ತೊಂದರೆ ಬಂದರೂ ಅದು ಇಂಥಹದೇ ತೊಂದರೆ ಎಂದು ನಿಖರವಾಗಿ ಹೇಳಬಲ್ಲರು. ಅಷ್ಟೊಂದು ಕಾರ್ಯತತ್ಪರತೆ ವೃತ್ತಿಪರತೆ ಅವರಲ್ಲಿ ಇರುವದು ವಿಶೇಷವಾಗಿದೆ.

ಖಾಸಗಿ ಬಸ್ಸಿನ ಕ್ಲೀನರ್ ಕೆಲಸ ಕಠಿಣವಾದುದು, ಮಳೆಗಾಳಿಗೆ ಮೈ ಒಡ್ಡಿ ಕೆಲಸ ನಿರ್ವಹಿಸಬೇಕು. ಸಂಜೆ ಬಸ್ಸನ್ನು ತೊಳೆದು ಶುಚಿಗೊಳಿಸುವದು ; ಸಣ್ಣಪುಟ್ಟ ರಿಪೇರಿ ಪತ್ತೆ ಹಚ್ಚುವದು; ಬಸ್ಸಿನ ಟಯರ್ ರಸ್ತೆಯಲ್ಲಿ ಪಂಚರ್ ಆದರೆ ಸರಿಪಡಿಸುವದು ಇತ್ಯಾದಿ ಕೆಲಸ ನಿರ್ವಹಿಸಬೇಕಾಗಿದೆ. ಇದನ್ನೆಲ್ಲಾ ಆರಿತು ಖಾಸಗಿ ಬಸ್ಸಿನಲ್ಲಿ ಹೆಚ್ಚು ದಿನ ಕ್ಲೀನರ್ ಆಗಿ ಕೆಲಸ ನಿರ್ವಹಿಸಲು ಯಾರು ಮುಂದೆ ಬರುತ್ತಿಲ್ಲ; ಆದರೆ ದೇವರಾಜು ಕಳೆದ 35 ವರ್ಷಗಳಿಂದ ವೃತ್ತಿ ನಿರ್ವಹಿಸುತ್ತಿರುವದು ಅಸಾದಹರಣ ಸೇವೆಯೇ ಆಗಿದೆ.