ಮಡಿಕೇರಿ, ಸೆ. 15: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳ ತನಕವೂ ವರ್ಷಾಧಾರೆಯನ್ನು ಆನಂದಿಸುತ್ತಿದ್ದ ಜನತೆ; ಕಾವೇರಿ ನಾಡಿನತ್ತ ಈ ಕಾಲಮಾನದಲ್ಲಿ ಹರ್ಷೋಲ್ಲಾಸದಿಂದ ಆಗಮಿಸುತ್ತಿ ದ್ದುದು ಇದೀಗ ಇತಿಹಾಸವೆನಿಸ ತೊಡಗಿದೆ. ಬದಲಾಗಿ ಕಳೆದ ವರ್ಷದ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜಲಸ್ಫೋಟದಿಂದ ವರ್ಷ ಋತುವಿನ ಸಂತಸದ ಕ್ಷಣ ಮರೆಯಾಗತೊಡಗಿದೆ. ಈ ವರ್ಷ ಮತ್ತೆ ಸಂಭವಿಸಿರುವ ಜಲಪ್ರವಾಹ ಜನಮಾನಸದ ಸ್ಥೈರ್ಯವನ್ನು ಇನ್ನಷ್ಟು ಕುಗ್ಗುವಂತೆ ಮಾಡಿದೆ. ಈ ನಡುವೆ ಮಳೆಯ ದಾಖಲೆಗಳನ್ನು ಗಮನಿಸಿದಾಗ 1924ರ ಜುಲೈ 25 ರಂದು ಭಾಗಮಂಡಲಕ್ಕೆ ಸುರಿದಿರುವ ದಿನವೊಂದರ ಮಳೆ 33.14 ಇಂಚು ಗೋಚರಿಸಿದೆ.

ಹೀಗೆ ಕೊಡಗಿನ ಅಲ್ಲಲ್ಲಿ ಕಾಲಮಾನಕ್ಕೆ ತಕ್ಕಂತೆ ಮಳೆಯ ಏರಿಳಿತವಿದ್ದರೂ; ಒಂದೊಮ್ಮೆ ಋತುಮಾನಗಳ ಸನ್ನಿವೇಶಕ್ಕೆ ಹೊಂದಿಕೊಂಡು ಈ ಮಳೆಗಾಲವನ್ನು ಸಹಜ ಬಾವದಿಂದ ಸಂಭ್ರಮಿಸುತ್ತಿದ್ದ ಮಂದಿ ಕಳೆದೆರಡು ವರ್ಷದಿಂದ ಅಂಜತೊಡಗಿದ್ದಾರೆ.

ಮಳೆಯ ಹಿನ್ನೋಟ : ಸರಕಾರಿ ದಾಖಲೆಗಳ ಪ್ರಕಾರ 1924ರಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಹೊರತುಪಡಿಸಿ ನೋಡಿದಾಗ; ಆ ವರ್ಷದ ಜುಲೈ 15 ರಂದು ಶನಿವಾರಸಂತೆಯಲ್ಲಿ 10.40 ಇಂಚು ಮಳೆ ಗೋಚರಿಸಿದೆ; ಜು. 16 ರಂದು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 8.75 ಇಂಚು ಮಳೆಯಾಗಿದೆ. ಅಂತೆಯೇ ಜು. 17 ರಂದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಒಂದೇ ದಿನದಲ್ಲಿ 14.35 ಇಂಚು ಮಳೆಯಾದರೆ; ನಾಪೋಕ್ಲು ವ್ಯಾಪ್ತಿಗೆ 12.72 ಇಂಚು ದಾಖಲೆಯ ಮಳೆ ಸುರಿದಿದೆ.

ಇನ್ನು 1924ರ ಜುಲೈ 18 ರಂದು ಸೋಮವಾರಪೇಟೆ ವ್ಯಾಪ್ತಿಯಲ್ಲಿ 9.34 ಇಂಚು ಮಳೆಯಾಗಿದೆ. ಅದೇ ವರ್ಷ ಜು. 25 ರಂದು ಪೊನ್ನಂಪೇಟೆ ಪ್ರದೇಶದಲ್ಲಿ 11.94 ಇಂಚು ದಾಖಲಾಗಿದೆ. ಆ ದಿನವೇ ಅಮ್ಮತ್ತಿ ಸುತ್ತಮುತ್ತ 16.16 ಇಂಚು ದಾಖಲೆಯ ಮಳೆಯಾಗಿದೆ.

ದಾಖಲೆಯ ಮಳೆ : ಆನಂತರದ ದಿನಗಳಲ್ಲಿ 1926ರ ಜುಲೈ 7 ರಂದು ವೀರಾಜಪೇಟೆ ವ್ಯಾಪ್ತಿಗೆ ಒಂದೇ ದಿನ 14.42 ಇಂಚು, 1933ರ ಆಗಸ್ಟ್ 19 ರಂದು ಮೂರ್ಕಲ್ಲುವಿನಲ್ಲಿ 6.90 ಇಂಚು ಮಳೆಯಾಗಿದೆ. 1941ರ ಜೂನ್ 9 ರಂದು ಶ್ರೀಮಂಗಲಕ್ಕೆ ಒಂದೇ ದಿನದಲ್ಲಿ 10.70 ಇಂಚು ಮಳೆ ಗೋಚರಿಸಿದೆ.

ಹೀಗೆ ವರ್ಷಗಳು ಉರುಳಿದಂತೆ ಆಯ ಪ್ರದೇಶಗಳಲ್ಲಿ ದಿನವೊಂದಕ್ಕೆ ದಾಖಲಾಗಿರುವ ಮಳೆಯಂತೆ; 1943ರಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ಜುಲೈ 11 ರಂದು 7.5 ಇಂಚು, ಜುಲೈ 13 ರಂದು ಪಾಲಿಬೆಟ್ಟಕ್ಕೆ 13 ಇಂಚು ಮಳೆ ಸುರಿದಿದ್ದು, ಸಂಪಾಜೆ ವ್ಯಾಪ್ತಿಗೆ 9.75 ಇಂಚು ಮಳೆ ದಾಖಲಾಗಿದೆ. ಇನ್ನು 1948 ಜುಲೈ 9 ರಂದು ಕುಶಾಲನಗರ ವ್ಯಾಪ್ತಿಯಲ್ಲಿ 6.31 ಇಂಚು ಹಾಗೂ ದುಬಾರೆಯಲ್ಲಿ 5.75 ಇಂಚು ಮಳೆ ಗೋಚರಿಸಿದೆ. ಆ ಬಳಿಕ 1953ರ ಜುಲೈ 6 ರಂದು ಹಾರಂಗಿ ಜಲಾನಯನ ಪ್ರದೇಶದ ಹುದುಗೂರು ಸುತ್ತಮುತ್ತ 4.23 ಇಂಚು, ಕರಿಕೆ ವ್ಯಾಪ್ತಿಯಲ್ಲಿ 11.79 ಇಂಚು ಮಳೆ ದಾಖಲಾಗಿದೆ.

ಅಲ್ಲದೇ ಅದೇ ದಿವಸ ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ 10.44 ಇಂಚು ಮಳೆಯಾದರೆ, ನಾಗರಹೊಳೆ ಸುತ್ತಮುತ್ತ 12.09 ಇಂಚು, ಕಾರ್ಮಾಡು ವ್ಯಾಪ್ತಿಗೆ 11.46 ಇಂಚು ದಾಖಲೆಯ ಮಳೆಯಾಗಿದೆ. 1956ರ ಆಗಸ್ಟ್ 16 ರಂದು ಮಾಕುಟ್ಟ ಸರಹದ್ದಿಗೆ 11.98 ಇಂಚು ಮಳೆ ದಾಖಲಾಗಿದೆ.

ವಾಡಿಕೆ ಮಳೆ : ಈ ರೀತಿ ಸರಾಸರಿ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 1901 ರಿಂದ 1970ರ ದಶಕದಲ್ಲಿ ಕೊಡಗಿನಲ್ಲಿ ಸರಾಸರಿ ಮಳೆ ಗಮನಿಸಿದರೆ ಮಡಿಕೇರಿ ತಾಲೂಕಿನಲ್ಲಿ 129.41 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 104.77 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 86.85 ಇಂಚು ಗೋಚರಿಸಿದೆ. ಹೀಗಾಗಿ ಕೊಡಗಿನ ಸರಾಸರಿ ಮಳೆ 107.01 ಇಂಚು ಕಂಡು ಬಂದಿದೆ.

ಮಳೆ ವ್ಯತ್ಯಾಸ : ವರ್ಷಗಳು ಉರುಳಿದಂತೆ 1990ರ ವೇಳೆಗೆ ಜಿಲ್ಲೆಯಲ್ಲಿ ಸರಾಸರಿ 92.95 ಇಂಚು ಮಳೆಯಾಗಿದೆ. ಆ ವರ್ಷ ಮಡಿಕೇರಿ ತಾಲೂಕಿನಲ್ಲಿ 126.81 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 73.81 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 78.18 ಇಂಚು ಮಳೆ ಸುರಿದಿದೆ.

ಆತಂಕಕ್ಕೆ ಕಾರಣ : ಹೀಗೆ ಕಾಲಮಾನ ಬದಲಾಗುತ್ತಿದ್ದಂತೆ, ಕಳೆದ ವರ್ಷದ ಮಳೆಗಾಲ ಸಾಕಷ್ಟು ಆತಂಕ ಸೃಷ್ಟಿಸಿದೆ. 2018ರ ಮೇ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಸರಾಸರಿ 14.93 ಇಂಚು ಮಳೆಯಾಗಿದೆ. ಜೂನ್ ತಿಂಗಳಿನಲ್ಲಿ 33.8 ಇಂಚು, ಜುಲೈನಲ್ಲಿ 43.54 ಇಂಚು ಹಾಗೂ ಆಗಸ್ಟ್‍ನಲ್ಲಿ 40.34 ಇಂಚು ಮಳೆಯೊಂದಿಗೆ ಪ್ರಾಕೃತಿಕ ವಿಕೋಪ ಸಂಭವಿಸುವಂತಾ ಯಿತು.

ವರ್ಷದ ಮಳೆ : ಅಂತೆಯೇ ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 197.61 ಇಂಚು ಮಳೆ ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ 115.51 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 122.27 ಇಂಚು ಮಳೆಯೊಂದಿಗೆ ಕೊಡಗಿಗೆ ಸರಾಸರಿ 145.13 ಇಂಚು ದಾಖಲಾಗಿದೆ.

ಪ್ರಸಕ್ತ ಸೆಪ್ಟೆಂಬರ್ ಮಾಸದಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ, ಭಾಗಮಂಡಲ, ಶಾಂತಳ್ಳಿ ಸೇರಿದಂತೆ ಗ್ರಾಮೀಣ ಘಟ್ಟ ಶ್ರೇಣಿಯ ಅಲ್ಲಲ್ಲಿ ಆಗಿಂದಾಗ್ಗೆ ಮಳೆ ಮುಂದುವರಿದಿದೆ. ನಿನ್ನೆಯಿಂದ ವೀರಾಜಪೇಟೆ ತಾಲೂಕು ಸೇರಿದಂತೆ ಇತರೆಡೆಗಳಲ್ಲಿ ವರುಣನ ಮುನಿಸು ದೂರವಾಗಿದೆ. ಹೀಗಿದ್ದರೂ ಒಂದೊಮ್ಮೆ ವರ್ಷಋತುವಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಕೊಡಗು ಮತ್ತು ಈ ಜಿಲ್ಲೆಯ ಜನತೆ ದೈನಂದಿನ ಮನೋಲ್ಲಾಸ ಕಳೆದು ಕೊಂಡಂತೆ ಬಾಸವಾಗತೊಡಗಿದೆ.