ಕೂಡಿಗೆ, ಸೆ. 15: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದ ರಸ್ತೆಯು ತೀರಾ ಹಾಳಾಗಿದ್ದು, ರಸ್ತೆಯ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೃಷಿ ಇಲಾಖೆಯ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳುವ ರಸ್ತೆ ತೀರಾ ಗುಂಡಿ ಗಳಿಂದ ಕೂಡಿದ್ದು, ಪೂರ್ಣ ಪ್ರಮಾಣದಲ್ಲಿ ಹಾಳಾಗಿದೆ.

ಕೂಡಿಗೆ ಡೈರಿ ಸರ್ಕಲ್‍ನಿಂದ ವಸತಿ ಶಾಲೆಯ ಗೇಟ್‍ನವರೆಗೆ ರಸ್ತೆ ಹಾಳಾಗಿದ್ದು, ಅದನ್ನು ಸರಿಪಡಿಸ ಬೇಕೆಂಬದು ಪೋಷಕರ ಆಗ್ರಹ ವಾಗಿದೆ. ಇಲ್ಲಿ ವಿವಿಧ ಇಲಾಖೆಗಳಿದ್ದು, ದಿನಂಪ್ರತಿ ನೂರಾರು ವಾಹನಗಳು ಹಾಗೂ ನೌಕರ ವರ್ಗದವರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಉಂಟಾಗುತ್ತಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ನೆನೆಗುದಿಯಲ್ಲಿ ಬಿದ್ದಿರುವ ಈ ರಸ್ತೆಯು ಗುಂಡಿಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡಬೇಕಾಗಿದೆ ಎಂದು ಆರೋಪಿಸಿದ್ದಾರೆ.

ರಸ್ತೆ ದುರಸ್ತಿ ಕಾರ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟದ್ದು ಎಂದು ಕೃಷಿ ಇಲಾಖೆಯವರು ನಿರ್ಲಕ್ಷಿಸುತ್ತಿದ್ದಾರೆ. ಕೃಷಿ ಇಲಾಖೆಯ ಸ್ಥಳವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹಾಗೂ ಕ್ರೀಡಾ ಶಾಲೆಗೆ ಸ್ಥಳವನ್ನು ನೀಡಿದ್ದು, ಮಿನಿ ವಿಮಾನ ನಿಲ್ದಾಣಕ್ಕೆ ಜಾಗವನ್ನು ಮೀಸಲಿಡಲು ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಾಗಿದೆ. ಯಾರೂ ಕೂಡಾ ರಸ್ತೆ ಇಲಾಖೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕುಶಾಲನಗರದಿಂದ ಸೈನಿಕ ಶಾಲೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಈವರೆಗೆ ಯಾವದೇ ಬೆಳವಣಿಗೆಗಳು ನಡೆದಿರುವದಿಲ್ಲ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.