ಕುಶಾಲನಗರ, ಸೆ. 15: ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನೂತನ ಮೋಟಾರು ವಾಹನ ಕಾಯ್ದೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದಂಡದ ಆತಂಕದ ನಡುವೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಂಜೆಯಾಗುತ್ತಲೇ ವ್ಯಾಪಾರ ವಹಿವಾಟು ಬಹುತೇಕ ಕುಸಿತ ಕಂಡುಬಂದಿದೆ.

ಕಳೆದ ಕೆಲವು ದಿನಗಳಿಂದ ವಾಹನ ಚಾಲನೆ ಸಂದರ್ಭ ದಾಖಲೆಗಳು ಇಲ್ಲದೆ ನಿಯಮ ಉಲ್ಲಂಘನೆ ಹಿನ್ನೆಲೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಸಾವಿರಾರು ರೂಪಾಯಿಗಳ ದಂಡ ತೆತ್ತ ವರದಿಗಳು ಪತ್ರಿಕೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬೆನ್ನಲ್ಲೇ ನೆರೆಯ ಹಳ್ಳಿಗಳಿಂದ ಕುಶಾಲನಗರ ಪಟ್ಟಣಕ್ಕೆ ಆಗಮಿಸುವ ನಾಗರಿಕರ ಸಂಖ್ಯೆ ಬಹುತೇಕ ಕ್ಷೀಣಿಸತೊಡಗಿದೆ.

ಈ ಕಾರಣದಿಂದ ಇಡೀ ಪಟ್ಟಣ ವ್ಯಾಪ್ತಿಯಲ್ಲಿ ಜನಸಂಚಾರ ವಿರಳಗೊಳ್ಳುವದರೊಂದಿಗೆ ವ್ಯಾಪಾರ ವಹಿವಾಟು ಇಳಿಮುಖಗೊಂಡಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಇದೀಗ ನೂತನ ಮೋಟಾರ್ ವಾಹನ ಕಾಯ್ದೆ ವ್ಯಾಪಾರಿಗಳಿಗೆ ಭಾರೀ ಹೊಡೆತ ನೀಡಿದೆ ಎಂದರೆ ತಪ್ಪಾಗಲಾರದು.

ಈ ನಡುವೆ ಸಂಜೆಗತ್ತಲೆ ಆವರಿಸುತ್ತಲೇ ಕುಶಾಲನಗರಕ್ಕೆ ಲಗ್ಗೆಯಿಡುತ್ತಿದ್ದ ಮದ್ಯ ಪ್ರಿಯರು ಪಟ್ಟಣದ ಬಾರ್‍ಗಳಿಗೆ ತೆರಳಲು ಕೂಡ ಹಿಂಜರಿಯುತ್ತಿದ್ದು, ಇದರಿಂದ ಪಟ್ಟಣದ ಬಹುತೇಕ ಬಾರ್‍ಗಳು ಗ್ರಾಹಕರಿಲ್ಲದೆ ಬಿಕೋ ಎನ್ನುವಂತಾಗಿದೆ. ವಾಹನಗಳಲ್ಲಿ ಬರುವ ಗ್ರಾಹಕರು ಡ್ರಿಂಕ್ ಆಂಡ್ ಡ್ರೈವ್ ನಿಯಮದಡಿ ಸಿಲುಕಿಕೊಳ್ಳುವ ಆತಂಕದಲ್ಲಿ ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದಾರೆ. ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿದೆ. ಕಳೆದ 1 ವಾರದಿಂದ ತಮ್ಮ ಬಾರ್‍ನಲ್ಲಿ ಶೇ. 70 ರಷ್ಟು ವ್ಯಾಪಾರ ಕುಸಿದಿದೆ ಎನ್ನುತ್ತಾರೆ ಕುಶಾಲನಗರದ ಹೊಟೇಲ್ ಉದ್ಯಮಿ ಎಂ.ಎಂ. ಚರಣ್. ಸರಕಾರ ಕಾನೂನು ರೂಪಿಸಿರುವದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂದರ್ಭ ಇಂತಹ ಏರುಪೇರು ಸೃಷ್ಟಿಯಾಗುವದರೊಂದಿಗೆ ವ್ಯಾಪಾರೋದ್ದಿಮೆಗಳು ನಷ್ಟಕ್ಕೆ ಒಳಗಾಗುತ್ತಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲಗರದಲ್ಲಿ ಪೊಲೀಸರು ನೂತನ ಮೋಟಾರ್ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಚಾಲಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ದಿನವಿಡೀ ತಮ್ಮ ಕರ್ತವ್ಯದಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ. ದುಪ್ಪಟ್ಟು ದಂಡ ತೆತ್ತ ವಾಹನ ಚಾಲಕರು ಮತ್ತೆ ವಾಹನ ಚಾಲಿಸಲು ಹಿಂಜರಿಯುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಾಲಿಸುವ ದ್ವಿಚಕ್ರ ವಾಹನ ಚಾಲಕರ ಸಂಖ್ಯೆ ಕಾಣುತ್ತಿಲ್ಲ. ಇನ್ನೊಂದೆಡೆ ಅಪ್ರಾಪ್ತರು ತಮ್ಮ ಪೋಷಕರ ವಾಹನವನ್ನು ರಸ್ತೆಗೆ ಇಳಿಸುವದರೊಂದಿಗೆ ಮನಸೋಇಚ್ಚೆ ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯ ಕೂಡ ಗೋಚರಿಸುತ್ತಿಲ್ಲ.

ಪಾನಪ್ರಿಯರು ಮಾತ್ರ ಈ ಕಟ್ಟುನಿಟ್ಟಿನ ನಿಯಮಕ್ಕೆ ಸಿಲುಕಿ ಒದ್ದಾಡುತ್ತಿರುವದು ಮಾತ್ರ ಗುಟ್ಟಾಗಿ ಉಳಿದಿಲ್ಲ. ಗ್ರಾಮಾಂತರ ಪ್ರದೇಶಗಳ ಮದ್ಯದಂಗಡಿಗಳು, ಬಾರ್‍ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದರೆ ಇತ್ತ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಕೂಡ ಈ ನೂತನ ಕಾಯ್ದೆ ಅವರ ಮೋಜಿಗೆ ಅಡ್ಡಿಯುಂಟು ಮಾಡಿದೆ. ಕುಶಾಲನಗರಕ್ಕೆ ಬಂದ ಬೆಂಗಳೂರಿನ ಪ್ರವಾಸಿಗರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನಂತರ ವಾಹನ ಚಾಲನೆಗೆ ಅವಕಾಶ ಇಲ್ಲದ ಹಿನ್ನೆಲೆ ಖಾಸಗಿ ಚಾಲಕರನ್ನು ನಿಯೋಜಿಸಿ ಮಡಿಕೇರಿ ಕಡೆಗೆ ತೆರಳಬೇಕಾದ ಪ್ರಸಂಗವೂ ಸೃಷ್ಟಿಯಾಗಿತ್ತು. ಮದುವೆ ಸಮಾರಂಭದ ಹಿಂದಿನ ದಿನ ಚಪ್ಪರಕ್ಕೆ ಕೂಡ ವಾಹನಗಳಲ್ಲಿ ಬರುವ ಆಹ್ವಾನಿತರ ಸಂಖ್ಯೆ ವಿರಳವಾಗಿದ್ದು ಒಟ್ಟಾರೆ ಪಾನಪ್ರಿಯರಿಗೆ ಪೊಲೀಸರ ದಂಡದ ಭಯ ಆವರಿಸಿದೆ ಎಂದರೆ ತಪ್ಪಾಗಲಾರದು.

ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಇದೀಗ ನೂತನ ಮೋಟಾರ್ ವಾಹನ ಕಾಯ್ದೆ ಕೂಡ ಸೇರ್ಪಡೆಗೊಳ್ಳುವದರೊಂದಿಗೆ ಪ್ರವಾಸಿಗರ ಕೊರತೆ ಮತ್ತು ಸ್ಥಳೀಯರ ಓಡಾಟವಿಲ್ಲದೆ ವ್ಯಾಪಾರೋದ್ದಿಮೆಗಳಿಗೆ ಎಲ್ಲಾ ಬೆಳವಣಿಗೆ ಕಂಟಕವಾಗಿ ಪರಿಣಮಿಸಿದೆ.

- ಚಂದ್ರಮೋಹನ್