ಸಿದ್ದಾಪುರ: ನದಿ ದಡಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮನೆ ಆಸ್ತಿ ಪಾಸ್ತಿಗಳು ಪ್ರವಾಹದಿಂದ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆ ಸರಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾಗಿರುವ ಅದೆಷ್ಟೋ ಕುಟುಂಬಗಳನ್ನು ಶಾಶ್ವತ ಯೋಜನೆಗಳ ಮೂಲಕ ಮುಂದೆ ತರಬೇಕೆಂದ ಅವರು, ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ನಮ್ಮ ಕೊಡಗು ತಂಡ ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದೆ. ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಬೆಂಗಳೂರಿನ ಬನವಾಸಿ ಕನ್ನಡಿಗರು ಮತ್ತು ಉದಯ್ ನೇತೃತ್ವದ ವೇ ಫಾರ್ ಲೈಫ್ ಹಾಗೂ ಜಯಂತಿ ಗ್ರೂಪಿನ ವತಿಯಿಂದ ರೂ. 5 ಲಕ್ಷ ಮೌಲ್ಯದ ಸಾಮಗ್ರಿಗಳ 400 ಕಿಟ್‍ಗಳನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಕಕ್ಕಟಕಾಡು, ಕೂಡುಗದ್ದೆ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬರಗುಂಡಿ, ಬೆಟ್ಟದಕಾಡು ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.

ಕಳೆದ ಕೆಲ ದಿನಗಳ ಹಿಂದೆ ದಾನಿಗಳ ಸಹಕಾರದಿಂದ ಕರಡಿಗೋಡು, ಕೊಂಡಂಗೇರಿ, ಬೇತ್ರಿ, ಬಲಮುರಿ ಸೇರಿದಂತೆ ವಿವಿಧ ನದಿ ದಡದ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ.

ಸಂತ್ರಸ್ತ ಕುಟುಂಬದ ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಮುಂದೆ ತರಲು ನಮ್ಮ ಕೊಡಗು ತಂಡ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು. ಈ ಸಂದರ್ಭ ಬೆಂಗಳೂರು ಸಂಘಟನೆಗಳ ಪ್ರಮುಖರಾದ ಜೈ ಕಿರಣ್, ಉದಯ್, ಚಂದನ್, ಸೀಮಾ, ಕಿರಣ್ ಮಾಯಿ, ಅಜಿತ್, ಉಮೇಶ್, ರೋಷನ್, ಲೋಹಿತ್, ಬಶೀರ್, ರೆಜಿತ್ ಕುಮಾರ್, ಗಿರೀಶ್ ಜಾಸ್ನ, ಕೃಷ್ಣ ಮುಂತಾದವರು ಭಾಗವಹಿಸಿದ್ದರು.ಚೆಟ್ಟಳ್ಳಿ: ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ವತಿಯಿಂದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಕೊಂಡಂಗೇರಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಇದೇ ಗ್ರಾಮಸ್ಥರಾದ ಅಬ್ದುಲ್ಲಾ ಹಾಜಿ ತಮ್ಮ ಒಂದೂವರೆ ಎಕರೆ ಜಾಗವನ್ನು ಕೊಂಡಂಗೇರಿ ಜಮಾಅತ್‍ಗೆ ಹಸ್ತಾಂತರಿಸಿದರು. ಮನೆ ನಿರ್ಮಾಣದ ಜಾಗದ ಉದ್ಘಾಟನೆಯನ್ನು ಉಡುಪಿ ಹಾಗೂ ಹಾಸನ ಜಿಲ್ಲೆಯ ಖಾಝಿಯಾದ ಬೇಕಲಂ ಇಬ್ರಾಹಿಂ ಮುಸ್ಲಿಯಾರ್ ಮಾಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಉಪಖಾಝಿ ಮಹ್ಮೂದ್ ಮುಸ್ಲಿಯಾರ್ ಎಡಪಲಾ, ಇಲ್ಯಾಸ್ ತಂಙಲ್ ಎಮ್ಮೆಮಾಡು, ಹಫೀಲ್ ಸಹದಿ, ರಹ್ಮಾನ್ ಫಾಲಿಲಿ ಕೊಂಡಂಗೇರಿ ಹಾಗೂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ, ಜಾಗ ದಾನಿ ಅಬ್ದುಲ್ಲಾ ಹಾಜಿ, ಅಶ್ರಫ್ ಅಹ್ಸನಿ ಅನ್ವಾರ್ ಇದ್ದರು.