ಸಿದ್ದಾಪುರ. ಸೆ. 15: ಪ್ರತಿ ವರ್ಷ ಮಳೆಗಾಲದಲ್ಲಿ ನದಿಯಲ್ಲಿ ಉಂಟಾಗುವ ಪ್ರಳಯಕ್ಕೆ ಸಂಕಷ್ಟ ಕ್ಕೀಡಾಗುವ ನದಿ ತಟದ ನಿವಾಸಿಗಳಿಗೆ ಸರ್ಕಾರ ಶಾಶ್ವತ ಸೂರು ಒದಗಿಸಿ ಅವರನ್ನು ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು ಹಾಗೆಯೇ ನಮಗೂ ಶಾಶ್ವತ ಸೂರು ಒದಗಿಸಿಕೊಡಬೇಕೆಂಬ ಕೂಗು ಇದೀಗ ಬಾಡಿಗೆ ಹಾಗೂ ಲೈನ್ ಮನೆಯಲ್ಲಿ ವಾಸವಾಗಿರುವವರಿಂದ ಕೇಳಿಬಂದಿದೆ.
ಮಳೆಗಾಲ ಬಂತೆಂದರೆ ಸಾಕು ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ನೆಲ್ಲಿಹುದಿಕೇರಿ ಮತ್ತು ಸಿದ್ದಾಪುರ ಭಾಗದಲ್ಲಿನ ನದಿ ತೀರದ ಮನೆಗಳಿಗೆ ನೀರು ನುಗ್ಗುವದರಿಂದ ನದಿ ತೀರದ ಮನೆಗಳು ಜಲಾವೃತವಾಗಿ ನಿವಾಸಿಗಳು ತೊಂದರೆಗೆ ಸಿಲುಕುತ್ತಿದ್ದರು. ಕಂದಾಯ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಜನಪ್ರತಿನಿಧಿಗಳು ಇವರ ರಕ್ಷಣೆಗೆ ಧಾವಿಸಿ ಅಲ್ಲೇ ಠಿಕಾಣಿ ಹೂಡಿ ಅವರ ಸೇವೆಯಲ್ಲಿ ತೊಡಗಿಸಿಕೊಂಡು ಮನೆಗೆ ನೀರು ನುಗ್ಗಿ ನಿವಾಸಿಗಳನ್ನು ಸರ್ಕಾರದ ಪರಿಹಾರ ಕೇಂದ್ರಗಳಲ್ಲಿ ತಂಗಿಸಿ ನಂತರ ನೀರು ಇಳಿಕೆಯಾದ ಮೇಲೆ ತಮ್ಮ ಮನೆಗಳಿಗೆ ಕಳುಹಿಸುವದು ವಾಡಿಕೆಯಾಗಿತ್ತು. ಇವರಿಗೆ ಪರಿಹಾರ ನೆಪದಲ್ಲಿ ಮತ್ತು ಉಪಚಾರದ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತಿತ್ತು. ಈ ವರ್ಷ ಸುರಿದ ಮಳೆಗೆ ಈ ಭಾಗದ ಅನೇಕ ಮನೆಗಳು ನೆಲಸಮವಾದವು. ಬಹಳಷ್ಟು ಮನೆಗಳು ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಲ್ಲದಂತಾಗಿ ನದ ತೀರದ ನಿವಾಸಿಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿ ಹೋಗಲು ಸ್ಥಳವಿಲ್ಲದೆ ಸರ್ಕಾರಿ ಶಾಲೆಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು ಬೇರೆ ಕಡೆ ಶಾಶ್ವತ ನೆಲೆ ನಿರ್ಮಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾದ ಹಿನ್ನೆಲೆ ಸರ್ಕಾರ ಇವರುಗಳ ಶಾಶ್ವತ ಸ್ಥಳಾಂತರಕ್ಕೆ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡುವಿನ ಗ್ರೀನ್ ಪೀಡ್ ತೋಟದಲ್ಲಿರುವ ಪೈಸಾರಿ ಜಾಗದಲ್ಲಿ ಮತ್ತು ಸಿದ್ದಾಪುರ ಭಾಗದಲ್ಲಿ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕೊಡಗು ಶ್ರೀರಂಗಪಟ್ಟಣದಲ್ಲಿರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಇವರುಗಳ ಸ್ಥಳಾಂತರಕ್ಕೆ ಮುಂದಾಗಿದೆ.
ನದಿ ದಡದ ನಿವಾಸಿಗಳಿಗೆ ಮನೆ ನಿರ್ಮಿಸಲು ಮುಂದಾಗಿರುವ ಸರ್ಕಾರ ಬಾಡಿಗೆ ಮನೆಯಲ್ಲಿ ಹಾಗೂ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವವರಿಗೆ ನಿವೇಶನ ಏಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಬಾಡಿಗೆ ಮನೆಯಲ್ಲಿರುವವರಿಂದ ಎದ್ದಿದೆ. ಈ ಭಾಗದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಹುತೇಕ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಇವರು ಆರ್ಥಿಕವಾಗಿ ದುರ್ಬಲರಾಗಿದ್ದು ಬಹಳಷ್ಟು ಶ್ರಮ ವಹಿಸಿ ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಬಾಡಿಗೆ ಮತ್ತು ತೋಟದ ಲೈನ್ ಮನೆಗಳಲ್ಲಿದ್ದು ಬಾಡಿಗೆ ಕಟ್ಟಲು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮುಂತಾದವುಗಳನ್ನು ನಿಭಾಯಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಲಕ್ಷ್ಮೀ ಪತ್ರಿಕೆಯೊಂದಿಗೆ ಮಾತನಾಡಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಎಲ್ಲಾ ಹೊಂದಿರುವ ನಮಗೇಕೆ ಸರ್ಕಾರ ಶಾಶ್ವತ ಸೂರು ಒದಗಿಸಿ ಕೊಡುತ್ತಿಲ್ಲ, ನಮ್ಮ ಮತ ಮಾತ್ರ ಸಾಕಾ ನಾವು ಸಂಘಟಿತರಲ್ಲದ ಕಾರಣ ಹೋರಾಟ ಮಾಡುತ್ತಿಲ್ಲ.
ನಮ್ಮ ಪರ ಧ್ವನಿಯೆತ್ತಲೂ ಯಾವದೇ ರಾಜಕೀಯ ಪ್ರಕ್ಷಗಳು, ಸಂಘ-ಸಂಸ್ಥೆಗಳು ಮುಂದೆ ಬರುತ್ತಿಲ್ಲ ಹಾಗಾಗಿ ಸರ್ಕಾರಕ್ಕೆÀ ನಮ್ಮ ಬವಣೆ ಗೊತ್ತಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನಮಗೂ ಸರ್ಕಾರ ಪೈಸಾರಿ ಜಾಗಗಳನ್ನು ಗುರುತಿಸಿ ಶಾಶ್ವತ ಸೂರು ಕಲ್ಪಸಿಕೊಟ್ಟಲ್ಲಿ ನಾವು ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದಿತ್ತು ಎಂದಿದ್ದಾರೆ. ಸರ್ಕಾರ ನಿವೇಶನ ರಹಿತರ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಮೂಲಕ ಸಿದ್ಧಪಡಿಸಿದಾಗ ಇವರುಗಳೆಲ್ಲ ಅರ್ಜಿ ಹಾಕಿದ್ದು ಇದುವರೆಗೂ ಯಾವದೇ ಪ್ರಯೋಜನವಾಗಿಲ್ಲ ಈ ಭಾಗಗಳಲ್ಲಿ ಸಾಕಷ್ಟು ಪೈಸಾರಿ ಜಾಗಗಳಿದ್ದು ನೆರೆ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವದರೊಂದಿಗೆ ನಮಗೂ ಅಲ್ಲಿಯೇ ಮನೆ ನಿರ್ಮಿಸಿ ಕೊಡಿ ಎಂದು ಬೇಡಿಕೆಯನ್ನಿಟ್ಟಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹೇಳಿರುವ ಹೆಚ್.ಬಿ. ರಮೇಶ್, ನಾವು ಬಹಳಷ್ಟು ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸವಾಗಿದ್ದೇವೆ. ನಮಗೆ ಮನೆ ನಿರ್ಮಿಸಿ ಕೊಡಲು ಬೇಡಿಕೆಯಿಟ್ಟರು ಸರ್ಕಾರ ಮಾತ್ರ ಗಮನಕ್ಕೆ ತೆಗೆದುಕೊಂಡಿಲ್ಲ. ನಮಗೂ ಸ್ವಂತ ಮನೆ ಬೇಕು ಎಂಬ ಕನಸು ಇದೆ, ಸ್ವಂತ ಜಾಗ ಖರೀದಿಸಿ ಅದರಲ್ಲಿ ಮನೆ ಕಟ್ಟಲು ನಮ್ಮ ಬಳಿ ಹಣವಿಲ್ಲ. ಹಾಗಾಗಿ ಈ ಭಾಗದಲ್ಲಿರುವ ಪೈಸಾರಿ ಜಾಗಗಳನ್ನು ಗುರುತಿಸಿ ನಮಗೂ ಮನೆ ನಿರ್ಮಿಸಿ ಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
- ಸುಬ್ರಮಣಿ, ಸಿದ್ದಾಪುರ.