ಗೋಣಿಕೊಪ್ಪ ವರದಿ, ಸೆ. 15 : ಗದ್ದೆಯಲ್ಲಿ ಮೇಯುತ್ತಿದ್ದ ಎರಡು ತಿಂಗಳ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ. ಜನರು ಭಯದಿಂದ ಕೂಗಿಕೊಂಡಾಗ ಕರುವನ್ನು ಬಿಟ್ಟು ಚಿರತೆ ಸಮೀಪದ ತೋಟ ಸೇರಿಕೊಂಡಿದೆ.

ಮಾಯಮುಡಿ ಗ್ರಾಮದ ಕೊಂಙಂಡ ರವಿ ಕಾರ್ಯಪ್ಪ ಅವರಿಗೆ ಸೇರಿದ ಕರುವನ್ನು ಉಳಿದ ಜಾನುವಾರುಗಳೊಂದಿಗೆ ಗದ್ದೆಯಲ್ಲಿ ಬಿಡಲಾಗಿತ್ತು. ಈ ಸಂದರ್ಭ ಸಮೀಪದ ತೋಟದಿಂದ ದಾಳಿ ನಡೆಸಿದ ಚಿರತೆಯನ್ನು ಕಂಡು ಉಳಿದ ಜಾನುವಾರುಗಳು ಓಡಿ ತಪ್ಪಿಸಿಕೊಂಡವು. ಕರು ಓಡಲಾಗದೆ ಜೀವ ಕಳೆದುಕೊಂಡಿದೆ. ಜನರು ಕೂಗಿಕೊಂಡಾಗ ಚಿರತೆ ಕರುವನ್ನು ಬಿಟ್ಟು ತೋಟ ಸೇರಿಕೊಂಡಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಶನಿವಾರದಿಂದ ಗ್ರಾಮದ ಎರಡು ಕಡೆಗಳಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಗ್ರಾಮಸ್ಥರು ಭಯಗೊಂಡಿದ್ದರು. ಆದರೆ ಇದೀಗ ದಾಳಿ ನಡೆದಿರುವದು ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಆಗ್ರಹಿಸಿದ್ದಾರೆ. - ಸುದ್ದಿಪುತ್ರ