ಮಡಿಕೇರಿ, ಸೆ. 15: ಕದ್ದ ಮಾಲು ಅಡವಿಡಲು ಹೊಂಚು ಹಾಕುತ್ತಿದ್ದ ಕೊಡಗು ಮೂಲದ ವ್ಯಕ್ತಿಯನ್ನು ಬಂಧಿಸಿರುವ ಮೈಸೂರು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು, ಬಂಧಿತನಿಂದ 90 ಗ್ರಾಂ. ಚಿನ್ನದ ಆಭರಣ, 400 ಗ್ರಾಮ ಬೆಳ್ಳಿ ಪದಾರ್ಥಗಳು, ಪೀಚೆ ಕತ್ತಿ, ದೇವರ ಹಿತ್ತಾಳೆಯ ವಿಗ್ರಹಗಳು ಮತ್ತು ಒಂದು ಕೋವಿ ವಶಪಡಿಸಿಕೊಂಡಿದ್ದಾರೆ.

ಕಕ್ಕಬ್ಬೆ ಬಳಿಯ ನಾಲಡಿ ಗ್ರಾಮದ ಕೆ.ಸಿ. ಅಶೋಕ ಅಲಿಯಾಸ್ ಅಶೋಕ ರಾಜಪ್ಪ (30) ಬಂಧಿತ ಆರೋಪಿ. ವಿಜಯನಗರ ಎರಡನೇ ಹಂತದಲ್ಲಿರುವ ರೈಲ್ವೆ ಬಡಾವಣೆ - ಸೂರ್ಯಬೇಕರಿ ರಸ್ತೆಯಲ್ಲಿರುವ ಖಾಸಗಿ ಚಿನ್ನದ ಗಿರವಿ ಅಂಗಡಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು ಮತ್ತು ಕೋವಿ ಪತ್ತೆಯಾದವು.

ಈ ಬಗ್ಗೆ ವಿಚಾರಿಸಿದಾಗ ವೀರಾಜಪೇಟೆಯ ಕಣ್ಣಂಗಾಲ ಗ್ರಾಮದಲ್ಲಿ ಚಿನ್ನಡ ಒಡವೆ, ಗೋಕ್ಲ ಸಿದ್ದಾಪುರ ಗ್ರಾಮದಲ್ಲಿ ಕೋವಿ ಹಾಗೂ ಕಡಂಗ ಮರೂರು ಗ್ರಾಮದಲ್ಲಿ ಒಂದು ಪೀಚೆ ಕತ್ತಿ, ಬೆಳ್ಳಿ ಪದಾರ್ಥ ಹಾಗೂ ಹಿತ್ತಾಳೆಯ ದೇವರ ವಿಗ್ರಹಗಳನ್ನು ಕಳವು ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.