ವೀರಾಜಪೇಟೆ, ಸೆ. 15: ನಿನ್ನೆ ಅಮ್ಮತ್ತಿಯಲ್ಲಿ ಜರುಗಿದ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಯುವಕ ಅಪಘಾತದಿಂದ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಮೈತಾಡಿ ಗ್ರಾಮ ಮಲ್ಲಂಬಟ್ಟಿ ನಿವಾಸಿ ದಿ. ಹೆಚ್. ಶಿವಪ್ಪ ಎಂಬವರ ಪುತ್ರ ಹೆಚ್.ಎಸ್. ಕವನ್ (22) ಎಂಬವರೇ ಮೃತ ದುರ್ದೈವಿ.ಗಣಪತಿ ವಿಸರ್ಜನೋತ್ಸವಕ್ಕೆ ತೆರಳುತಿದ್ದ ಬೈಕ್ ಸವಾರ ಕವನ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಚೆಂಬೆಬೆಳ್ಳೂರು ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.ಗಣಪತಿ ವಿಸರ್ಜನೆಯನ್ನು ವೀಕ್ಷಣೆ ಮಾಡಲು ತನ್ನ ಸ್ನೇಹಿತ ಮಂಜು ಎಂಬರೊಂದಿಗೆ ಪಲ್ಸರ್ ಬೈಕ್ನಲ್ಲಿ (ಕೆಎ 05 ಇವೈ 7344) ಚೆಂಬೆಬೆಳ್ಳೂರು ಬಳಿ ಒಂಟಿಅಂಗಡಿ ಮಾರ್ಗವಾಗಿ ವೀರಾಜಪೇಟೆಗೆ ಅಗಮಿಸುತಿದ್ದ ಸಂದರ್ಭ ಡಸ್ಟರ್ ಕಾರು (ಕೆಎ 12 ಜೆಡ್ 8828) ಹಾಗೂ ಬೈಕ್ ನಡುವೆ ಸಂಜೆ 7.30 ಗಂಟೆಗೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಕವನ್ ತಲೆ ಭಾಗಕ್ಕೆ ಮರಣಾಂತಿಕ ಗಾಯಗಳಾಗಿದ್ದು, ಅಧಿಕ ಪ್ರಮಾಣದಲ್ಲಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೈಕ್ನಲ್ಲಿ ಪ್ರಯಾಣಿಸುತಿದ್ದ ಹಿಂಬದಿ ಸವಾರ ಮಂಜು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಗಮಿಸಿದ ಗ್ರಾಮಾಂತರ ಪೊಲೀಸರು ಅಪಘಾತಪಡಿಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಮಂಜು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಮೊಹಿಸಿನ್ ಅಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಶರೀರವನ್ನು ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿ ದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.