ವೀರಾಜಪೇಟೆ, ಸೆ. 15: ಬಂಧುಗಳ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಮನೆಗೆ ಹಿಂತೆರಳುವ ವೇಳೆ ರಸ್ತೆ ದಾಟುವ ಹಂತದಲ್ಲಿ ಯಾವದೋ ವಾಹನ ಡಿಕ್ಕಿ ಹೊಡೆದಿರುವ ಪರಿಣಾಮ ಮಸಣ ಸೇರಿದ ಹೃದಯ ವಿದ್ರಾವಕ ಘಟನೆ ಬಿಟ್ಟಂಗಾಲದಲ್ಲಿ ಸಂಭವಿಸಿದೆ.
ನಿವೃತ್ತ ಸೈನಿಕರೂ ಆಗಿರುವ ಕೊಳತ್ತೋಡು-ಬೈಗೋಡು ನಿವಾಸಿ, ಮುರುವಂಡ ಸಿ. ಪೊನ್ನಪ್ಪ (57) ಎಂಬವರೇ ಈ ದುರ್ದೈವಿಯಾಗಿದ್ದಾರೆ.ಕಾಲನ ಲೀಲೆಯೇ ವಿಚಿತ್ರವೆನಿಸುತ್ತದೆ. ತಮ್ಮ ಕುಟುಂಬದವರ ಮದುವೆಗೆಂದು ಆಗಮಿಸಿದ್ದ ಈ ವ್ಯಕ್ತಿ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.ಬಿಟ್ಟಂಗಾಲ ಗ್ರಾಮದ ಕೊಳತ್ತೋಡು-ಬೈಗೋಡು ನಿವಾಸಿ ಮುರುವಂಡ ಸಿ. ಪೊನ್ನಪ್ಪ ಬಿಟ್ಟಂಗಾಲ ಮುಖ್ಯರಸ್ತೆಯ ಅಂಚಿನಲ್ಲಿರುವ ಕೂರ್ಗ್ ಯತ್ನಿಕ್ ಕಲ್ಯಾಣ ಮಂಟಪದಲ್ಲಿ ಮುರುವಂಡ ಕುಟುಂಬಸ್ಥರ ಮದುವೆ ಸಮಾರಂಭದ ಚಪ್ಪರ ದಿನದಂದು ರಾತ್ರಿ ಊಟ ಮುಗಿಸಿ ಆಗಸ್ಟೇ ಹೊರಗೆ ಬಂದಿದ್ದರು. ಕಲ್ಯಾಣ ಮಂಟಪದಿಂದ ರಸ್ತೆಯನ್ನು ದಾಟುವ ವೇಳೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಪಡಿಸಿ ಪರಾರಿಯಾಗಿದೆ. ಪರಿಣಾಮ ಪೊನ್ನಪ್ಪ ಅವರ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅಧಿಕವಾಗಿ ರಕ್ತಸ್ರಾವಗೊಂಡಿದ್ದು, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಮದುವೆ ಮುಗಿಸಿ ಮನೆಯತ್ತ ಸಾಗುತ್ತಿದ್ದ ಕುಟುಂಬದ ಸದಸ್ಯರೊಬ್ಬರು ರಕ್ತದ ಮಡುವಿನಲ್ಲಿದ್ದ ಪೊನ್ನಪ್ಪ ಅವರನ್ನು ಕಂಡು ವಿಷಯ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊನ್ನಪ್ಪ ಅವರ ಮಗ ಮೋನಿಶ್ ಸೋಮಯ್ಯ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಮೃತ ಶರೀರವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಂದ ಶವಪರೀಕ್ಷೆ ಬಳಿಕ ಮೃತ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಮೃತರು ಮಗ, ಮಗಳನ್ನು ಅಗಲಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್.