ಹೆಬ್ಬಾಲೆ/ಸೋಮವಾರಪೇಟೆ, ಸೆ. 15: ಸೋಮವಾರಪೇಟೆ ತಾಲೂಕಿನ ಬಾಣಾವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅರಿಶಿನಗುಪ್ಪೆ ಗೋಪಾಲ್ ತನ್ನ ಜಮೀನಿನಲ್ಲಿದ್ದ ಮೂರು ಬೃಹತ್ ಶ್ರೀಗಂಧದ ಮರಗಳನ್ನು ಕಡಿದು ನಾಟಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಹಾಗೂ ವಲಯ ಅರಣ್ಯಾಧಿಕಾರಿ ಶಮಾ ಮಾರ್ಗದರ್ಶನದಲ್ಲಿ ಬಾಣಾವಾರ ಉಪ ವಲಯ ಅರಣ್ಯಾಧಿಕಾರಿ ಪುನೀತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಶ್ರೀಗಂಧದ ಸುಮಾರು ರೂ. 1.5 ಲಕ್ಷ ಬೆಲೆ ಬಾಳುವ 30 ಕೆ.ಜಿ. ನಾಟಗಳನ್ನು ವಶಪಡಿಸಿಕೊಂಡು ಅರಿಸಿನಗುಪ್ಪೆ ಗ್ರಾಮದ ಗೋಪಾಲ್‍ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಬೈಕ್, ಗರಗಸ, ಕತ್ತಿ, ಅರ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಿಶಿನಗುಪ್ಪೆಯ ಕೆ.ಜಿ. ಮಿಲನ, ಗಂಗಾಧರ್ ಆಲಿಯಾಸ್ ಪಾಪು, ಗಿರೀಶ್ ಅರಕಲಗೂಡು ತಾಲೂಕಿನ ಬೆಳ್ಳಾಮೆ ಗ್ರಾಮದ ತಿಮ್ಮಯ್ಯ ಆಲಿಯಾಸ್ ಪಟ್ಟು ಎಂಬವರುಗಳು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಚಂದ್ರೇಶ್, ಸಿಬ್ಭಂದಿಗಳಾದ ರಾಜಣ್ಣ, ವೀರಪ್ಪ, ಯೋಗೇಶ್ ಹಾಗೂ ಚಾಲಕ ಸಂದೀಪ್ ಪಾಲ್ಗೊಂಡಿದ್ದರು.