ಇಗ್ಗುತಪ್ಪ ಕೇರಿಯಿಂದ ‘ಕೈಲ್‍ಪೊಳ್ದ್’

ಮಡಿಕೇರಿ, ಸೆ. 13: ಉತ್ತಮ ಪರಿಕಲ್ಪನೆಯಿಂದ ಅಸ್ತಿತ್ವಕ್ಕೆ ಬಂದಿರುವ ಕೊಡವ ಕೇರಿಗಳು ಒಂದು ಕುಟುಂಬದ ರೀತಿಯಲ್ಲಿ ಪರಸ್ಪರ ಬಾಂಧವ್ಯ ಹೊಂದಿರಬೇಕು. ಒಂದು ಸಂಸಾರದ ರೀತಿಯಲ್ಲಿ ಎಲ್ಲರ ಕಷ್ಟ-ನಷ್ಟಗಳಲ್ಲಿ ಪಾಲ್ಗೊಂಡು ಸಹಕರಿಸುವಂತಾಗಬೇಕು ಎಂದು ನಗರದ ಶ್ರೀ ಇಗ್ಗುತಪ್ಪ ಕೊಡವ ಕೇರಿಯ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅಭಿಪ್ರಾಯಪಟ್ಟರು.

ಕೇರಿಯ ವತಿಯಿಂದ ನಗರದ ಕೊಡವ ಸಮಾಜದಲ್ಲಿ ಜರುಗಿದ ಕೈಲ್‍ಪೊಳ್ದ್ ಸಂತೋಷಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ ಮಂಡಳಿ ಎಲ್ಲರ ವಿಶ್ವಾಸ-ಸಲಹೆ ಸ್ವೀಕರಿಸಿ ಕೆಲಸ ನಿರ್ವಹಿಸುತ್ತದೆ ಎಂದರು ನುಡಿದರು.

ಅತಿಥಿಗಳಾಗಿದ್ದ ಲೀಡ್ ಬ್ಯಾಂಕ್‍ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಕೇಕಡ ಎ. ದೇವಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟಿ ನಂತಹ ಹಲವು ವಿಚಾರಗಳಲ್ಲಿ ಅವಕಾಶದ ಕೊರತೆಗಳು ಇರುವದು ನಿಜವಾದರೂ ಉತ್ತಮ ಶಿಕ್ಷಣದೊಂದಿಗೆ ಸರಕಾರಿ ಉದ್ಯೋಗಗಳಲ್ಲಿ ಜಿಲ್ಲೆಯ ಯುವಜನಾಂಗ ತೊಡಗಿಸಿಕೊಳ್ಳದಿರುವದು ವಿಷಾದನೀಯ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು. ಸರಕಾರದ ಉನ್ನತ ಹುದ್ದೆಗಳು, ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್.ನಲ್ಲಿ ಕೊಡವ ಜನಾಂಗದವರ ಸಂಖ್ಯೆ ಕಡಿಮೆ ಇದೆ. ಬ್ಯಾಂಕ್‍ಗಳಲ್ಲಿ ಪ್ರಸ್ತುತ ಸ್ಥಳೀಯರು ಕಡಿಮೆಯಾಗುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವದು ಅಗತ್ಯ. ಅಲ್ಲದೆ ಸ್ವಯಂ ಉದ್ಯೋಗಕ್ಕೂ ಹಲವು ಅವಕಾಶಗಳಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಸ್ಥಳೀಯರು ವಿವಿಧ ಇಲಾಖೆಗಳಲ್ಲಿ ಇಲ್ಲದ ಕಾರಣ ಹಲವಾರು ಸಮಸ್ಯೆಗಳನ್ನು ಪ್ರಸ್ತುತ ಎದುರಿಸುವಂತಾಗಿದೆ ಎಂದು ದೇವಯ್ಯ ಅಭಿಪ್ರಾಯಪಟ್ಟರಲ್ಲದೆ, ವಿಶೇಷವಾದ ಸಂಪ್ರದಾಯ, ಸಂಸ್ಕøತಿಯನ್ನು ಉಳಿಸಿ-ಬೆಳೆಸುವತ್ತ ಗಮನಹರಿಸಬೇಕೆಂದರು.

ಕೇರಿಯ ಕಾರ್ಯದರ್ಶಿ ಬೊಳ್ಳಾರ್‍ಪಂಡ ಲೀಲಾ ಸುಬ್ಬಯ್ಯ, ವಾರ್ಷಿಕ ವರದಿ ಹಾಗೂ ಖಜಾಂಚಿ ಪಡೆಯಟ್ಟಿರ ಹರೀಶ್ ಮುತ್ತಪ್ಪ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸಿ.ಬಿ.ಎಸ್.ಸಿ.ಯಲ್ಲಿ ಶೇ. 95 ಅಂಕಗಳಿಸಿದ ವಿದ್ಯಾರ್ಥಿಗಳಾದ ಬಾಚಿನಾಡಂಡ ವಿಧೀಶ್ ಹಾಗೂ ಅಸಾದಾರಣ ಪ್ರತಿಭೆಗೆ ಪ್ರಶಸ್ತಿ ಗಳಿಸಿದ ಪಟ್ಟಮಾಡ ಕಾರ್ತಿಕ್ ಕುಟ್ಟಪ್ಪ ಅವರನ್ನು ಪುರಸ್ಕರಿಸಲಾಯಿತು.

ಚೆಯ್ಯಂಡ ಬಬಿನ್ ಬೋಜಣ್ಣ ಪ್ರಾರ್ಥಿಸಿ, ಉಪಾಧ್ಯಕ್ಷ ಬಲ್ಯಂಡ ಪ್ರಕಾಶ್ ಸ್ವಾಗತಿಸಿದರು. ನೆರವಂಡ ಬಬಿನಾ ಜೀವನ್ ನಿರೂಪಿಸಿ, ಮುಕ್ಕಾಟಿರ ವಿಮಲಾ ಮುತ್ತಣ್ಣ ವಂದಿಸಿದರು.

ಕ್ರೀಡಾ ಸ್ಪರ್ಧೆ-ಹಾಡುಗಾರಿಕೆ

ಸಂತೋಷಕೂಟದ ಅಂಗವಾಗಿ ಸಂಘದ ಪುರುಷರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಪರಾಹ್ನ ಸಹ ಭೋಜನದ ಬಳಿಕ ಕಲಾವಿದ ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಹಾಡುಗಾರಿಕೆ ನಡೆದು ಈ ಕಾರ್ಯಕ್ರಮಗಳಲ್ಲಿ ಸದಸ್ಯರು ಸಂಭ್ರಮದಿಂದ ಭಾಗಿಗಳಾಗಿದ್ದರು. ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.