ಮಡಿಕೇರಿ, ಸೆ. 13: ರಾಜ್ಯದ ಎಂಟು ಆನೆ ಶಿಬಿರಗಳಲ್ಲಿನ ಆನೆಗಳ ಸರಣಿ ಸಾವು ಪ್ರಕರಣದ ಸಮಗ್ರ ಅಧ್ಯಯನಕ್ಕೆ ನಾಲ್ವರು ತಜ್ಞರ ಸಮಿತಿ ರಚಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ತಜ್ಞರ ಸಮಿತಿಯಲ್ಲಿರುವ ವೈಲ್ಡ್ ಲೈಫ್ ಫಸ್ಟ್ ಸಂಘಟನೆಯ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ಸರಕಾರದಿಂದ ಅಧಿಕೃತ ಆದೇಶ ಬಂದ ಬಳಿಕ ಆನೆಗಳ ಸಾವಿನ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ.

ರಾಜ್ಯದ ಎಂಟು ಸಾಕಾನೆಗಳ ಶಿಬಿರಗಳಲ್ಲಿ ಆಗಿಂದಾಗ್ಗೆ ಆನೆಗಳು ಅಸಹಜವಾಗಿ ಸಾವನ್ನಪ್ಪಿದ್ದವು. ಮೈಸೂರು ದಸರಾ ಆನೆ ದ್ರೋಣ ಸೇರಿದಂತೆ ಆನೆಗಳ ಅಸಹಜ ಸರಣಿ ಸಾವು ಪ್ರಾಣಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯವಾದಿ ಎನ್.ಪಿ. ಅಮೃತೇಶ್ ರಾಜ್ಯ ಉಚ್ಚನ್ಯಾಯಾಲಯ ದಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರುಗಳ ದ್ವಿಸದಸ್ಯ ಪೀಠ ರಾಜ್ಯದಲ್ಲಿ ಆನೆಗಳ ಸರಣಿ ಸಾವು ಪ್ರಕರಣದ ಸಮಗ್ರ ಅಧ್ಯಯನಕ್ಕೆ ನಾಲ್ವರ ತಜ್ಞರ ಸಮಿತಿ ರಚಿಸಲು ರಾಜ್ಯ ಸರ್ಕಾರಕ್ಕೆ ನಿದೇಶನ ನೀಡಿದೆ. ವಕೀಲ ಅಮೃತೇಶ್ ಅವರು 9 ಮಂದಿ ಆನೆ ತಜ್ಞರ ಹೆಸರುಗಳ ಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು. ಅದರಲ್ಲಿ ನ್ಯಾಯಪೀಠ ನಾಲ್ವರು ಆನೆ ತಜ್ಞರನ್ನು ಆಯ್ಕೆ ಮಾಡಿದ್ದು, ಇದರಲ್ಲಿ ವೈಲ್ಡ್ ಲೈಫ್ ಫಸ್ಟ್ ಸಂಘಟನೆಯ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ ಅವರನ್ನು ಸಮಿತಿಗೆ ನೇಮಿಸಿದೆ.

(ಮೊದಲ ಪುಟದಿಂದ) ಈ ಕುರಿತು ಕೆ.ಎಂ.ಚಿಣ್ಣಪ್ಪ ಮಾತನಾಡಿ, ಆನೆಗಳ ಶಿಬಿರಗಳಲ್ಲಿ ನಡೆದ ಆನೆಗಳ ಸಾವಿನ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಉಚ್ಚನ್ಯಾಯಾಲಯ ತಮ್ಮನ್ನು ಸೇರಿದಂತೆ ನಾಲ್ವರು ತಜ್ಞರ ಸಮಿತಿಯನ್ನು ನೇಮಿಸಿ ಸರ್ಕಾರಕ್ಕೆ ಆದೇಶಿಸಿದೆ. ಈ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ಬಂದ ಬಳಿಕ ಆನೆಗಳ ಸಾವಿನ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವದೆಂದು ಪ್ರತಿಕ್ರಿಯೆ ನೀಡಿದ್ದಾರೆ.