ಕೂಡಿಗೆ, ಸೆ. 14: ಬದುಕಿನಲ್ಲಿ ಯಾವದೇ ಅಡೆತಡೆಗಳಿಗೆ, ಸೋಲಿಗೆ ಅಂಜಬಾರದು. ದುಡುಕಿನ ನಿರ್ಧಾರಕ್ಕೆ ಮುಂದಾಗದೆ ಬದುಕಿನ ಗುರಿ ಸಾಧನೆಗೆ ನಿರಂತರವಾಗಿ ಪ್ರಯತ್ನಿಸಿ. ತಮ್ಮಲ್ಲಿರುವ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಲು ಸದಾ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಕೊಡಗು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಆಶ್ರಯದಲ್ಲಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ತೋರುವ ಬದ್ಧತೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳ ಬೇಕಿದೆ. ಶಿಕ್ಷಕರು, ಪೆÇೀಷಕರ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕು ಎಂದರು.

ಮುಖ್ಯ ಭಾಷಣಕಾರರಾಗಿದ್ದ ಮಡಿಕೇರಿ ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಮಾತನಾಡುತ್ತಾ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ, ಉದ್ಯೋಗಕ್ಕಾಗಿಯೇ ಕಾಯುವ ಬದಲು ಸಮಾಜದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು, ತಮ್ಮ ಅಂತರ್‍ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕ್ರಿಯಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ತಮ್ಮಿಂದ ಮತ್ತೊಬ್ಬರಿಗೆ ಸಹಾಯವಾಗುವಂತಹ ಒಳ್ಳೆಯ ಕಾರ್ಯವನ್ನು ಮಾಡಲು ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ವಿಶೇಷ ಪ್ರತಿಭೆಗಳನ್ನು ಹೊಂದಿರುತ್ತಾರೆ. ಇತರರೊಡನೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳದೆ, ಕೀಳರಿಮೆ ಹೊಂದದೆ ತಮ್ಮದೇ ಹಾದಿಯಲ್ಲಿ ನಡೆಯಬೇಕಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಶಿಕ್ಷಕರ ಶ್ರಮ ಶ್ಲಾಘನೀಯ. ವಿದ್ಯಾರ್ಥಿಗಳ ಅಭ್ಯುದಯಕ್ಕೆ ಸದಾ ಶ್ರಮವಹಿಸುವ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗೌರವಿಸುತ್ತಿರುವದು ಮಹತ್ತರ ಕಾರ್ಯ. ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪಡೆದ ಶಿಕ್ಷÀಣ ವಿದ್ಯಾರ್ಥಿಗಳ ಪ್ರಗತಿಗೆ ದಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಚ್.ಎಲ್. ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಿತಿ, ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಸಾಧನೆ ತೋರಿದ ಸರಕಾರಿ ಶಾಲಾ ಕಾಲೇಜುಗಳ ಉಪನ್ಯಾಸಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದರು.

ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಮತ್ತು ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನಂದೀಶ್ ಮಾತನಾಡಿದರು.

2017-18ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಪಡೆದುಕೊಳ್ಳಲು ಕಾರಣಕರ್ತರಾದ ಕೂಡಿಗೆ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಹಾಗೂ ಉಪನ್ಯಾಸಕ ವೃಂದದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಎಚ್.ಪಿ. ಶಿವಕುಮಾರ್, ದಾಮೋದರ್, ವೀರಭದ್ರಯ್ಯ, ದೀಪಕ್ ಇದ್ದರು.