ಕೂಡಿಗೆ, ಸೆ. 13 : ಕೊಡಗು ಜಿಲ್ಲೆಯ ಚಿಕ್ಕಅಳುವಾರದಲ್ಲಿರುವ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನಾಗಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ತೊರೆನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಚಿಕ್ಕಅಳುವಾರದಲ್ಲಿರುವ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ಬೃಹತ್ತಾಗಿ ಬೆಳೆದು ವಿದ್ಯಾರ್ಥಿಗಳ ಜ್ಞಾನದೇಗುಲವಾಗಿದೆ. ಕಳೆದ ಐದು ವರ್ಷಗಳಿಂದ ಈ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರಕ್ಕೆ ಸರ್ಕಾರ ಮತ್ತು ವಿಶ್ವವಿದ್ಯಾನಿಲಯದ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಈಗಾಗಲೇ ಕೇಂದ್ರದಲ್ಲಿರುವ ವಿವಿಧ ವಿಭಾಗಗಳಿಗೆ ವ್ಯವಸ್ಥಿತವಾದ ಕಟ್ಟಡಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಸತಿ ಗೃಹದ ವ್ಯವಸ್ಥೆಯು ಇದೆ. ಜೊತೆಗೆ ಜಿಲ್ಲೆ ಮತ್ತು ಹೊರಜಿಲ್ಲೆಯ 500ಕ್ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಇದು ಜಿಲ್ಲೆಗೆ ಹಿರಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯದ ಚಿಂತನೆ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭ ತೊರೆನೂರು ಗ್ರಾ.ಪಂ ಅಧ್ಯಕ್ಷ ಕೆ.ಬಿ.ದೇವರಾಜ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕ ಟಿ.ಬಿ. ಜಗದೀಶ್, ಗ್ರಾ.ಪಂ ಸದಸ್ಯ ಮಹೇಶ್, ತೊರೆನೂರು ಸಹಕಾರ ಸಂಘದ ನಿರ್ದೇಶಕ ಕುಶಾಲಪ್ಪ, ಟಿ.ಪಿ.ಪ್ರಸನ್ನ, ಟಿ.ಜೆ.ಶ್ರೀನಿವಾಸ್ ಸೇರಿದಂತೆ ಪ್ರಮುಖರು ಇದ್ದರು.