ಮಡಿಕೇರಿ, ಸೆ. 13 : ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪೋಷಣ ಅಭಿಯಾನ ಮಾಸಾಚರಣೆ ಹಮ್ಮಿಕೊಂಡಿದ್ದು, ಈ ಯೋಜನೆಯ ಪ್ರಯೋಜನ ಅರ್ಹರಿಗೆ ತಲುಪುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಕೆಳಗಿನ ಕೊಡವ ಸಮಾಜದಲ್ಲಿ ನಡೆದ ‘ಪೋಷಣಾ ಅಭಿಯಾನ ಮಾಸಾಚರಣೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ಪೋಲಿಯೋ ನಿರ್ಮೂಲನೆಯಾದಂತೆ ಅಪೌಷ್ಠಿಕತೆಯೂ ನಿರ್ಮೂಲನೆ ಯಾಗಬೇಕು. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಅಪೌಷ್ಠಿಕತೆ ನಿವಾರಣೆ ಮಾಡಲು ಕೈಜೋಡಿಸಬೇಕಿದೆ ಎಂದರು.
ಸ್ಥಳೀಯವಾಗಿ ದೊರೆಯುವ ತರಕಾರಿ, ಸೊಪ್ಪು, ಮೊಳಕೆ ಕಾಳು ಉಪಯೋಗಿಸಿ ಆರೋಗ್ಯಯುತ ಬದುಕು ನಡೆಸುವಂತಾಗಬೇಕು. ರೆಡಿಮೇಡ್ ಹಾಗೂ ಜಿಂಕ್ ಫುಡ್‍ಗಳಿಂದ ದೂರವಿರಬೇಕು ಎಂದು ಶಾಸಕರು ಸಲಹೆ ಮಾಡಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ ಗ್ರಾಮೀಣ ಹಾಗೂ ಕುಗ್ರಾಮಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ತಡೆಯಲು ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
‘ಆರು ವರ್ಷದ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆಯನ್ನು ತಡೆಯುವದು, ಮಕ್ಕಳÀಲ್ಲಿ ಅಪೌಷ್ಠಿಕತೆ ತಡೆಯುವದು, ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆ ಮಾಡುವದು, 15 ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆ ಮಾಡುವದು, ಕಡಿಮೆ ತೂಕದ ಮಕ್ಕಳ ಜನನ ನಿಯಂತ್ರಿಸುವದು’ ಪೋಷಣಾ ಅಭಿಯಾನದ ಉದ್ದೇಶವಾಗಿದೆ ಎಂದರು.
ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಮಾತನಾಡಿ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಪೌಷ್ಠಿಕ ಆಹಾರ ಸೇವಿಸಬೇಕು. ಆ ನಿಟ್ಟಿನಲ್ಲಿ ಪೋಷಣಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧ ಮಾತನಾಡಿ ಆರು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಎದೆಹಾಲು ಮಹತ್ವದ ಬಗ್ಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಅರಿವು ಮೂಡಿಸುವದು. ಗರ್ಭಿಣಿ ಮತ್ತು ಬಾಣಂತಿಯರ ತೂಕ, ಪೌಷ್ಠಿಕ ಆಹಾರದ ಬಗ್ಗೆ ತಿಳುವಳಿಕೆ ನೀಡುವದು. ಟಿ.ಟಿ ಚುಚ್ಚು ಮದ್ದು ನೀಡಲು ಕ್ರಮ ಕೈಗೊಳ್ಳುವದು. ಗರ್ಭಿಣಿ ಮತ್ತು ಬಾಣಂತಿಯರಿಗೆ ಇರುವಂತಹ ಯೋಜನೆಗಳಾದ ಮಾತೃಪೂರ್ಣ, ಪ್ರಧಾನಮಂತ್ರಿ ಮಾತೃ ವಂದನಾ, ಮುಖ್ಯಮಂತ್ರಿ ಮಾತೃಶ್ರೀ ಮತ್ತು ಜನನಿ ಸುರಕ್ಷಾ ಯೋಜನೆಯ ಬಗ್ಗೆ ತಿಳುವಳಿಕೆ ನೀಡುವದು ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಆನಂದ್ ಮಾತನಾಡಿ ಅತಿಸಾರ ಬೇಧಿ ನಿರ್ಮೂಲನೆ, ಸ್ವಚ್ಛತೆ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು. ಜಂತುಹುಳು ನಿವಾರಣಾ ಮಾತ್ರೆ ಸೇವನೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ವಿಕಲಚೇತನರ ಅಧಿಕಾರಿ ಸಂಪತ್ ಕುಮಾರ್, ವ್ಯವಸ್ಥಾಪಕಿ ಸವಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಇತರರು ಇದ್ದರು.
ಜಿಲ್ಲಾ ನಿರೂಪಣಾ ಅಧಿಕಾರಿ ಅರುಂಧತಿ ಸ್ವಾಗತಿಸಿ, ಜಯಂತಿ ನಿರೂಪಿಸಿದರು. ಸಂಗೀತ ಮತ್ತು ತಂಡದವರು ನಾಡಗೀತೆ ಹಾಡಿದರು.
ಜಾಥಾಗೆ ಚಾಲನೆ: ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಪೋಷಣಾ ಮಾಸಾಚರಣೆ ಕುರಿತ ಜಾಥಾಕ್ಕೆ ಚಾಲನೆ ನೀಡಲಾಯಿತು.
ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ಹಣೆಗೆ ಅರಸಿನ, ಕುಂಕುಮ ಹಚ್ಚಿ, ಫಲ ತಾಂಬೂಲ ನೀಡಿ ಸೀಮಂತ ನೆರವೇರಿಸಲಾಯಿತು. ನಂತರ ಆರೋಗ್ಯವಂತ ಶಿಶು ಪ್ರದರ್ಶನ ನಡೆಯಿತು. ಪೌಷ್ಠಿಕ ಆಹಾರಗಳ ಪ್ರದರ್ಶನ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಆಯುಷ್ಮಾನ್ ಭಾರತ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.