ಮಡಿಕೇರಿ, ಸೆ. 13: ಸಾಹಿತಿ ಹಾಗೂ ಕವಿ ಕಿಗ್ಗಾಲು ಗಿರೀಶ್ ಅವರು ಬರೆದ ‘ರಂಗಣ್ಣನ ಹನಿಮೂನ್ ಪ್ರಸಂಗ ಮತ್ತು ಇತರ ಕಥೆಗಳು’ ಹಾಗೂ ‘ವಿದ್ಯಾರ್ಥಿಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯ’ ಎಂಬ ಎರಡು ಪುಸ್ತಕಗಳನ್ನು ರಾಮನಗರ ಜಾನಪದ ಲೋಕದಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ, ನಿವೃತ್ತ ಐ.ಎ.ಎಸ್. ಅಧಿಕಾರಿ ಟಿ. ತಿಮ್ಮೇಗೌಡ ಅವರು ಪುಸ್ತಕ ಬಿಡುಗಡೆ ಮಾಡಿ, ಪ್ರತಿಭಾನ್ವಿತರ ತಂಡ ಹೊಂದಿರುವ ಕೊಡಗು ಜಿಲ್ಲಾ ಜಾನಪದ ಘಟಕವನ್ನು ಶ್ಲಾಘಿಸಿದರು. ಕೊಡಗು ಜಿಲ್ಲಾ ತಂಡವು ರಾಜ್ಯದ ಇತರ ಜಿಲ್ಲಾ ತಂಡಗಳಿಗೆ ಮಾದರಿ ಆಗಿದ್ದು, ಜಿಲ್ಲೆಯ ಕ್ರಿಯಾತ್ಮಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವದಾಗಿ ಹೇಳಿದರು. ರಾಜ್ಯದಲ್ಲಿ ಬೆಳಕಿಗೆ ಬಾರದ ಕಲಾವಿದರು ಹಾಗೂ ಜಾನಪದ ಕಲೆಯನ್ನು ಗುರುತಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತ ಶಯನ ಮಾತನಾಡಿ, ರಾಜ್ಯದ ಎಲ್ಲೆಡೆಯ ಜಾನಪದ ಸಿರಿಯನ್ನು ಪ್ರತಿಬಿಂಬಿಸುತ್ತಿರುವ ಜಾನಪದ ಲೋಕದ ಪರಿಚಯವನ್ನು ಸದಸ್ಯರಿಗೆ ಮಾಡಿಸಲು ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದಾಗಿ ಹೇಳಿದರು.

ಜಿಲ್ಲೆಯಲ್ಲಿ ಜಾನಪದ ಉತ್ಸವ, ಶಾಲೆಗಳಲ್ಲಿ ಜಾನಪದ ಜಾಗೃತಿ ಕಾರ್ಯಕ್ರಮ ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ವಿವರಿಸಿದರು.

ಸಭೆಯಲ್ಲಿ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರುಗಳಾದ ಅಂಬೆಕಲ್ಲು ಕುಶಾಲಪ್ಪ, ರಾಣಿ ಮಾಚಯ್ಯ, ರವೀಂದ್ರ ರೈ, ಗೌರು ನಂಜಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಖಜಾಂಚಿ ಸಂಪತ್ ಕುಮಾರ್, ಘಟಕಾಧ್ಯಕ್ಷರುಗಳಾದ ಅನಿಲ್ ಎಚ್.ಟಿ., ಚಂದ್ರಮೋಹನ್, ಸುಮಿ ಸುಬ್ಬಯ್ಯ, ಸುಜಲಾದೇವಿ, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ವೇದಿಕೆಯಲ್ಲಿ ಜಾನಪದ ಲೋಕದ ಕಾರ್ಯದರ್ಶಿ ಬಸವರಾಜು, ಸಿ.ಎ.ಒ. ರುದ್ರಪ್ಪ ಉಪಸ್ಥಿತರಿದ್ದರು. ಕೆ. ಜಯಲಕ್ಷ್ಮಿ ನಿರೂಪಿಸಿದರು. ಮುನೀರ್ ಅಹ್ಮದ್ ಸ್ವಾಗತ ಹಾಗೂ ಅನಿಲ್ ಎಚ್.ಟಿ. ವಂದನಾರ್ಪಣೆ ಮಾಡಿದರು.

ರೀಟಾ ದೇಚಮ್ಮ ಹಾಗೂ ಕಾಶಿ ಅಚ್ಚಯ್ಯ ಜಾನಪದ ಹಾಡು ಹಾಡಿದರು.