ಜನ್ಮ ದಿನಕ್ಕೆ ಪೊಲೀಸರಿಗೆ ರಜೆ

ಬೆಂಗಳೂರು, ಸೆ. 14: ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡುವ ಮೂಲಕ ಪೊಲೀಸರ ಮುಖದಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಅವರು ಸಂತಸ ಮೂಡಿಸಿದ್ದಾರೆ. ಪೊಲೀಸರು ಅತಿ ಒತ್ತಡದಲ್ಲಿ ಕಾರ್ಯನಿರ್ವಹಿಸುವದರಿಂದ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕನಿಷ್ಟ ತಮ್ಮ ಹುಟ್ಟು ಹಬ್ಬಕ್ಕಾದರೂ ಕುಟುಂಬದೊಂದಿಗೆ ಖುಷಿಯಾಗಿ ಇದಲೆಂದು ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟುಹಬ್ಬದಂದು ಯಾವದೇ ಕೆಲಸದ ಒತ್ತಡವಿದ್ದರೂ ಅವರಿಗೆ ರಜೆ ನೀಡಬೇಕು.ಅಲ್ಲದೇ, ಅವರಿಗೆ ಶುಭಾಶಯ ಪತ್ರ ಕಳಿಸುವಂತೆ ವಿಶೇಷ ಆದೇಶವೊಂದನ್ನು ಅವರು ಹೊರಡಿಸಿದ್ದಾರೆ. ಹುಟ್ಟು ಹಬ್ಬದ ಶುಭಾಶಯ ಪತ್ರಗಳನ್ನು ಆಯಾ ಠಾಣೆಯ ಹಿರಿಯ/ಮೇಲುಸ್ತುವಾರಿ ಅಧಿಕಾರಿಗಳಿಗೆ ಖುದ್ದಾಗಿ ಠಾಣಾ/ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ನಗರ ಪೊಲೀಸ್ ಘಟಕದ ಎಲ್ಲಾ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರ ಬರಲು ಹಾಗೂ ಅವರ ಹುಟ್ಟು ಹಬ್ಬದ ದಿನದಂದು ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ರಜೆ ಕೊಡಬೇಕು. ಎಎಸ್‍ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿಯ ರಜೆಯನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ.

ಬಿನ್ ಲಾಡೆನ್ ಪುತ್ರ ಬಲಿ

ವಾಷಿಂಗ್ಟನ್, ಸೆ. 14: 7 ಕೋಟಿ ಇನಾಮು ಹೊಂದಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‍ನನ್ನು ಹೊಡೆದುರುಳಿಸಲಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ. ಆಗಸ್ಟ್ ಮೊದಲ ವಾರದಲ್ಲೇ ಹಮ್ಜಾ ಬಿನ್‍ನನ್ನು ಹತ್ಯೆ ಮಾಡಲಾಗಿದೆ ಎಂದ ಯುಎಸ್ ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದವು. ಕಳೆದ ಎರಡು ವರ್ಷಗಳ ಅಮೆರಿಕ ಸೇನೆಯ ಕಾರ್ಯಾಚರಣೆಯಲ್ಲಿ ಹಮ್ಜಾ ಬಿನ್ ಲಾಡೆನ್‍ನನ್ನು ಹೊಡೆದುರುಳಿಸಿದೆ ಎಂದು ಸ್ವತಃ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ. ಹಮ್ಜಾ ಬಿನ್ ತನ್ನ ತಂದೆ ಒಸಾಮಾ ಬಿನ್ ಲಾಡೆನ್ ಹಾಗೂ ಸಹೋದರ ಖಾಲಿದ್ ಬಿನ್ ಲಾಡೆನ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದ ಹೀಗಾಗಿ ಅಮೇರಿಕಾ ಹಮ್ಜಾ ತಲೆಗೆ 10 ಲಕ್ಷ ಡಾಲರ್ ಇನಾಮು ಘೋಷಿಸಿತ್ತು.

ಪ್ರತಿಭಟನೆಗೆ ಅನುಮತಿ ಕಡ್ಡಾಯ

ಬೆಂಗಳೂರು, ಸೆ. 14: ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಸಭೆ ಹಾಗೂ ಮೆರವಣಿಗೆ ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶ 2009 ಎಂಬ ಆದೇಶದಡಿ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ನಗರದಲ್ಲಿ ರಾಜಕೀಯ, ಧಾರ್ಮಿಕ ಸಂಘಟನೆ ಸೇರಿ ಇತರ ವ್ಯಕ್ತಿಗಳು ಪ್ರತಿಭಟನೆ, ಮೆರವಣಿಗೆ ಏರ್ಪಡಿಸುವ ಮುನ್ನ ಕರ್ನಾಟಕ ಪೊಲೀಸ್ ಕಾಯ್ದೆ 31 (ಐ)(ಒ) ಅಡಿಯಲ್ಲಿ ಸಭೆ ಹಾಗೂ ಮೆರವಣಿಗೆಗಳಿಗೆ ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶ -2009 ಎಂಬ ಆದೇಶದ ಪ್ರಕಾರ ಸಭೆ ಹಾಗೂ ಮೆರವಣಿಗೆ ಆಯೋಜಿಸುವ ಸಂಘಟನಾಕಾರರು, ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ 11 ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.