ಗೋಣಿಕೊಪ್ಪ ವರದಿ, ಸೆ. 14: ಇಲ್ಲಿನ ಗ್ರಾಮ ಪಂಚಾಯಿತಿಯ ಹಳೇ ಸಭಾಂಗಣದಲ್ಲಿ ಆಯೋಜಿಸಿದ್ದ ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಜಿ. ರಾಮಕೃಷ್ಣ ಅವರಿಗೆ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧಿಕಾರ ಹಸ್ತಾಂತರ ಮಾಡಿದರು.

ಶಾಸಕ ಕೆ.ಜಿ. ಬೋಪಯ್ಯ ಅವರ ಶ್ರಮದಿಂದ ಕಳೆದ ಬಾರಿ ಕೂಡ ಉತ್ತಮ ಅನುದಾನ ಸರ್ಕಾರದಿಂದ ದೊರೆತಿದೆ. ಈ ಬಾರಿ ಕೂಡ ಹೆಚ್ಚಿನ ಅನುದಾನ ಬಿಡುಗಡೆಯಾಗಲು ಶಾಸಕರ ಪ್ರಯತ್ನ ಮೆಚ್ಚುವಂತಹದ್ದು ಎಂದು ಅಧ್ಯಕ್ಷ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟರು. ಜನೋತ್ಸವ ಮತ್ತಷ್ಟು ಮೆರಗು ಪಡೆಯಲು ಸಾರ್ವಜನಿಕರ ಸಹಕಾರ ಅಗತ್ಯ. ನೂತನ ಆಡಳಿತ ಮಂಡಳಿಯಿಂದ ಉತ್ತಮವಾಗಿ ದಸರಾ ಆಚರಣೆ ನಡೆಯಲಿದೆ ಎಂದು ಅವರು ಹೇಳಿದರು.

ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಕೆ. ಜೆ. ರಾಮಕೃಷ್ಣ ಮಾತನಾಡಿ, ಶೀಘ್ರವಾಗಿ ಸಭೆ ನಡೆಸಿ ಜನರ ಸಲಹೆ ಪಡೆದು ಆಚರಣೆ ಬಗ್ಗೆ ರೂಪುರೇಷೆ ಮಾಡಿಕೊಳ್ಳಲಾಗುವದು ಎಂದರು.

ಕಾರ್ಯಾಧ್ಯಕ್ಷ ಬಿ. ಎನ್. ಪ್ರಕಾಶ್ ಕಳೆದ ಬಾರಿಯ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಕಳೆದ ಬಾರಿ ಕಲಾವಿದ ರಿಗೆ ನೀಡಬೇಕಾದ ಹಣದ ಪಾವತಿ ಯನ್ನು ನೇರವಾಗಿ ಜಿಲ್ಲಾಧಿಕಾರಿ ಮೂಲಕ ಪಾವತಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾದ ರೂ. 20 ಲಕ್ಷ ಅನುದಾನ ಬಳಕೆಯಾಗಿದೆ ಎಂದು ತಿಳಿಸಿದರು.

ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಹೆಚ್ಚು ಮೆರಗು ನೀಡುವ ಸ್ತಬ್ಧಚಿತ್ರ ಅನಾವರಣ ಪಡಿಸುವ ತಂಡಕ್ಕೆ ಪ್ರೋತ್ಸಾಹ ಧನವನ್ನು ನೀಡುವಂತೆ ಕಾವೇರಿ ದಸರಾ ಸಮಿತಿ ಹಿರಿಯ ಕಾರ್ಯಕರ್ತ ಪ್ರಭಾಕರ್ ನೆಲ್ಲಿತ್ತಾಯ ಒತ್ತಾಯಿಸಿದರು. ಸ್ತಬ್ಧಚಿತ್ರ ತಂಡಕ್ಕೆ ಬಹುಮಾನ ಮಾತ್ರ ದೊರೆಯುತ್ತಿದೆ. ಪಾಲ್ಗೊಂಡ ಎಲ್ಲರಿಗೂ ಆರ್ಥಿಕ ಸಹಾಯ ನೀಡ ಬೇಕು. ಇದರಿಂದ ಹೆಚ್ಚು ತಂಡಗಳು ಪಾಲ್ಗೊಳ್ಳಲು ಸಹಕಾರವಾಗುತ್ತದೆ ಎಂದು ಅವರು ಒತ್ತಾಯಿಸಿದರು.

ಗ್ರಾಮಸ್ಥ ಎಚ್. ಕೆ. ಜಗದೀಶ್ ಮಾತನಾಡಿ, ಕಾವೇರಿ ದಸರಾ ಸಮಿತಿಯು ಬೈಲಾ ತಿದ್ದುಪಡಿಗೆ ಯೋಜನೆ ರೂಪಿಸಬೇಕು. ಇದರಿಂದ ಸಮಿತಿಗೆ ಎಲ್ಲರನ್ನೂ ಸೇರಿಸಿಕೊಂಡು ಮುಂದುವರಿಯಲು ಅವಕಾಶ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು.

ತೇರು ಅನಾವರಣಗೊಳಿಸುವ ಉಪ ಸಮಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಮಿತಿ ಪ್ರಮುಖರು ಒತ್ತಾಯಿಸಿದರು. ಹಿರಿಯರಾದ ಬಾಲಕೃಷ್ಣರೈ, ಎಂ. ಜಿ. ಮೋಹನ್, ನಾರಾಯಣಸ್ವಾಮಿ ನಾಯ್ಡು ಸಲಹೆ ನೀಡಿದರು. ಪ್ರಧಾನ ಕಾರ್ಯದರ್ಶಿ ಚೇಂದೀರ ಪ್ರಭಾವತಿ ವರದಿ ವಾಚಿಸಿದರು. ಹಿರಿಯ ಸದಸ್ಯ ರಾಮಾಚಾರ್, ಕುಪ್ಪಂಡ ಗಣೇಶ್, ಸುಮಿ ಸುಬ್ಬಯ್ಯ, ಕೆ.ಪಿ ಬೋಪಣ್ಣ ಇದ್ದರು. -ಸುದ್ದಿಪುತ್ರ.