ಮಡಿಕೇರಿ, ಸೆ. 13: ಇಂದು ರಾಷ್ಟ್ರಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮಾರ್ಗದರ್ಶನದಲ್ಲಿ ಸಮರ್ಥವಾಗಿ ಪಕ್ಷ ಮುನ್ನಡೆಯುತ್ತಿದೆ. ಪಕ್ಷಕ್ಕೆ ನಮ್ಮ ಕೊಡಗೆಯೂ ಅತೀ ಮುಖ್ಯವಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಕೆಲಸವನ್ನು ನಮ್ಮ ಮನೆಯ ಕೆಲಸದಂತೆ ತಿಳಿದು ಶ್ರಮಿಸಬೇಕೆಂದು ಬಿಜೆಪಿ ಮುಖಂಡ ಕ್ಯಾ. ಗಣೇಶ್ ಕಾರ್ಣಿಕ್ ಕರೆ ನೀಡಿದರು. ಬಿಜೆಪಿ ಸದಸ್ಯತ್ವ ಅಭಿಯಾನದ ಅವಧಿಯನ್ನು ಇದೀಗ ಮತ್ತೆ 3 ತಿಂಗಳ ಕಾಲ ವಿಸ್ತರಿಸಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಸಹಕರಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕನಿಷ್ಟ 25 ಮಂದಿಯನ್ನಾದರೂ ಸದಸ್ಯರಾಗಿ ಸೇರಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಜವಾಬ್ದಾರಿಯುತ ಕಾರ್ಯಕರ್ತರೆನಿಸಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಮಡಿಕೇರಿ ತಾಲೂಕು ಬಿಜೆಪಿ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಕೊಡಗಿನ ಉಸ್ತ್ತುವಾರಿಯೂ ಆಗಿರುವ ಗಣೇಶ್ ಕಾರ್ಣಿಕ್ ಮಾತನಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಿಜೆಪಿ ಸರ್ವವ್ಯಾಪಿಯಾಗಿದ್ದು, ಮತ್ತೆ ಸದಸ್ಯತ್ವ ನೋಂದಣಿಗಾಗಿ ಪ್ರಧಾನಿ ಮೋದಿಯವರು 100 ದಿನಗಳ ಅವಕಾಶವನ್ನು ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ದುರಂತಕ್ಕೆ ರಾಜ್ಯ ಸರ್ಕಾರ ರೂ. 536 ಕೋಟಿ ಅನುದಾನ ಘೋಷಿಸಿತ್ತು. ಅದರಲ್ಲಿ ರೂ. 100 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಉಳಿದ ಹಣ ಸಧ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು. ಇನ್ನು ಸಭೆಯಲ್ಲಿ ಭಾಗಮಂಡಲದ ಕುದುಕುಳಿ ಭರತ್ ಮಾತನಾಡಿ, ನದಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಮರಳು ಸಾಗಣಿಕೆಗೆ ಅವಕಾಶ ನೀಡಬೇಕು ಹಾಗೂ ಕೊಡಗಿನ ಸಮಸ್ಯೆಯನ್ನು ಅರಿತುಕೊಂಡಿರುವ ಇಲ್ಲಿನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೋರಿಕೆಯನ್ನಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ.ಬೋಪಯ್ಯ, ಗದ್ದೆಗಳಲ್ಲಿ ಹೂಳೆತ್ತಲು, ಮರಳು ತೆಗೆಯಲು ಈಗಾಗಲೇ ಅವಕಾಶ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ನದಿಯಲ್ಲಿ ಹೂಳೆತ್ತುವ ಕಾರ್ಯಕ್ಕೆ ರೂ. 175 ಕೋಟಿಯ ಕಾರ್ಯಯೋಜನೆ ಹಾಕಿಕೊಂಡಿದೆ ಎಂದರಲ್ಲದೆ ಸಚಿವ ಸ್ಥಾನ ನೀಡುವದು ಬಿಡುವದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು. ಇನ್ನು ಸಾಲಮನ್ನಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ರೈತರ, ಬೆಳೆಗಾರರ ರೂ. 2000 ಕೋಟಿ ಸಾಲಮನ್ನಾ ಆಗಲಿದೆ ಎಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ, ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಹಾಗೂ ಬಿಜೆಪಿಯ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

ಬಡ್ಡಿ ರಿಯಾಯಿತಿಗೆ ಚೇಂಬರ್‍ನಿಂದ ಸಚಿವರಿಗೆ ಮನವಿ

ಗೋಣಿಕೊಪ್ಪಲು, ಸೆ.13: ಕೊಡಗು ಜಿಲ್ಲಾಧ್ಯಂತ ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪ ಮತ್ತು ಪ್ರವಾಹದಿಂದ ಕೊಡಗಿನಾದ್ಯಂತ ವ್ಯಾಪಾರ ವಹಿವಾಟು ಕುಂಟಿತಗೊಂಡಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ವರ್ತಕರು ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಪಡೆದಿರುವ ಸಾಲಕ್ಕೆ ಕನಿಷ್ಟ ಎರಡು ವರ್ಷ ಬಡ್ಡಿ ರಿಯಾಯಿತಿ ಹಾಗೂ ಅಸಲು ಕಂತು ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡುವಂತೆ ಒತ್ತಾಯಿಸಿ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾಫಿ ಮತ್ತು ಒಳ್ಳೆ ಮೆಣಸು ಕೈಕೊಟ್ಟ ಹಿನ್ನಲೆಯಲ್ಲಿ ಜಿಲ್ಲೆಯ ಕೃಷಿಕ, ರೈತರಲ್ಲಿ ಹಣದ ಮುಗ್ಗಟ್ಟು ಎದುರಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ವ್ಯಾಪಾರಸ್ಥರು ಹೊಟೇಲ್ ಉದ್ಯಮಿಗಳ ಭವಿಷ್ಯ ಕ್ಷೀಣಿಸುತ್ತಿದೆ. ನೌಕರರ ಸಂಬಳ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಪಡೆದ ಸಾಲ ಪಾವತಿಸಲಾಗದ ಸ್ಥಿತಿ ಎದುರಾಗಿದೆ. ಜಿಎಸ್‍ಟಿಯನ್ನು ಕಟ್ಟಲಾರದ ಪರಿಸ್ಥಿತಿಗೆ ವ್ಯಾಪಾರಿಗಳು, ಹೊಟೇಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ತಲಪಿದ್ದಾರೆ. ಆದುದರಿಂದ ಮುಂದಿನ ವಾರ್ಷಿಕ ವಹಿವಾಟು ವರ್ಷದವರೆಗೂ ಜಿಎಸ್‍ಟಿಯಲ್ಲಿ ಕೊಡಗು ಜಿಲ್ಲೆಗೆ ಸೀಮಿತಗೊಂಡಂತೆ ರಿಯಾಯಿತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು. ಚೇಂಬರ್‍ನ ಮಾಜಿ ಅಧ್ಯಕ್ಷ ಚಿದ್ವಿಲಾಸ್ ಹಾಗೂ ಟ್ರಸ್ಟ್‍ನ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭ ಸಚಿವರು ಮಾತನಾಡಿ ಈ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳ ಗಮನ ಸೆಳೆದು ಕ್ಯಾಬಿನೆಟ್‍ನಲ್ಲಿ ಚರ್ಚಿಸುವದಾಗಿ ಭರವಸೆ ನೀಡಿದರು. ಭೇಟಿಯ ಸಂದರ್ಭ ಕೊಡಗು ಜಿಲ್ಲಾ ಚೆÉೀಂಬರ್‍ನ ಅಧ್ಯಕ್ಷರಾದ ಬಿ.ಎನ್. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಕೇಶವ್ ಕಾಮತ್, ಶ್ರೀಮಂಗಲ ಸ್ಥಾನೀಯ ಸಮಿತಿಯ ಅಧ್ಯಕ್ಷ ಮಾಣೀರ ಮುತ್ತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. -ಹೆಚ್.ಕೆ. ಜಗದೀಶ್