ವೀರಾಜಪೇಟೆ, ಸೆ.13: ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ವಿಸರ್ಜನೋತ್ಸವ ಎರಡನೇ ವರ್ಷಕ್ಕೂ ಅದ್ಧೂರಿ ಆಡಂಬರವಿಲ್ಲದೆ ಮನರಂಜನೆಯ ಸದ್ದುಗದ್ದಲವಿಲ್ಲದೆ ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯಿತು. ಕಳೆದ ವರ್ಷ ಉತ್ತರ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪ ಈ ಬಾರಿ ದಕ್ಷಿಣ ಕೊಡಗಿನಲ್ಲಿನ ಭೀಕರ ಜಲಪ್ರಳಯದ ಕಾರಣ ಗೌರಿ ಗಣೇಶೋತ್ಸವ ಸರಳವಾಗಿ ಆಚರಿಸುವ ಪರಿಣಾಮ ಬೀರಿತು.ವೀರಾಜಪೇಟೆಯಲ್ಲಿ ತಾ.2ರಂದು ಪ್ರತಿಷ್ಠಾಪಿಸಿದ್ದ 21 ಉತ್ಸವ ಸಮಿತಿಗಳ ಪೈಕಿ 20ಉತ್ಸವ ಸಮಿತಿಗಳ ವಿದ್ಯುತ್ ಅಲಂಕೃತ ಮಂಟಪಗಳು ಸಾಮೂಹಿಕ ಮೆರವಣಿಗೆಯಲ್ಲಿ ಪಾಲ್ಗೊಂಡವು. ರಾತ್ರಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ಪೂರ್ಣವಾಗಿ ಬಿಡುವು ನೀಡಿದ್ದರಿಂದ ಸಾಮೂಹಿಕ ಮೆರವಣಿಗೆಗೆ ಯಾವದೇ ಸಮಸ್ಯೆಯಾಗಲಿಲ್ಲ. ಎಲ್ಲಾ ಮಂಟಪಗಳು ನಿರಾತಂಕವಾಗಿ ಸರದಿಯಂತೆ ಮೆರವಣಿಗೆಯಲ್ಲಿ ಸಾಗಿ ಬೆಳಗಿನ 6 ಗಂಟೆ ಸಮಯದಲ್ಲಿ ಸರದಿ ಪ್ರಕಾರ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರವಾದ ಗೌರಿಕೆರೆಯಲ್ಲಿ ಸಾಂಪ್ರದಾಯಿಕ ಪೂಜೆ ಪದ್ಧತಿಯೊಂದಿಗೆ ಮೂರ್ತಿಗಳನ್ನು ಇಂದು ಬೆಳಗಿನ 8ಗಂಟೆಯ ತನಕವೂ ವಿಸರ್ಜಿಸಲಾಯಿತು.

ವೀರಾಜಪೇಟೆ ವಿಭಾಗದಲ್ಲಿ ಅಪರಾಹ್ನದಿಂದಲೇ ಮೋಡ ಕವಿದ ವಾತಾವರಣ ಇದ್ದುದರಿಂದ ಗೌರಿಗಣೇಶ ವಿಸರ್ಜನೋತ್ಸವಕ್ಕೆ ಭಕ್ತಾದಿಗಳ, ವೀಕ್ಷಕರ ಸಂಖ್ಯೆ ಕಡಿಮೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಮಳೆ ಬಿಡುವು ನೀಡಿದ್ದರಿಂದ ಹಿಂದಿನ ವರ್ಷಗಳಂತೆ ಕೇರಳದ ಗಡಿಭಾಗದಿಂದ, ಜಿಲ್ಲೆÀ ಹಾಗೂ ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿನ ಗಡಿಯಾರಕಂಬದ ಬಳಿಯಿರುವ ಗಣಪತಿ ದೇವಾಲಯದ ಸೇವಾ ಟ್ರಸ್ಟ್ ವತಿಯಿಂದ ರಾತ್ರಿ ಸುಮಾರು 9 ಗಂಟೆಗೆ ಗಣೇಶನಿಗೆ ಪೂಜಾ ಸೇವೆಯೊಂದಿಗೆ ಗಣಪತಿ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕೂರಿಸುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿಯ 101 ಈಡುಗಾಯಿ ಸೇರಿದಂತೆ ಭಕ್ತಾದಿಗಳಿಂದ ಈಡುಗಾಯಿಯ ಮಹಾಪೂರವೇ ಹರಿಯಿತು. ಈಡುಗಾಯಿ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಭಕ್ತಾದಿಗಳ ಪೂಜಾ ಸೇವೆ, ದೇವರ ಸ್ಮರಣೆಯೊಂದಿಗೆ ರಾತ್ರಿ 10-45ಕ್ಕೆ ಸರದಿ ಪ್ರಕಾರದಂತೆ ಗಣಪತಿ ದೇವಾಲಯದಿಂದ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾತ್ರಿ 12ಗಂಟೆಗೆ ಗಣಪತಿ ದೇವಾಲಯದ ಮಂಟಪ ಬಸವೇಶ್ವರ ದೇವಾಲಯವನ್ನು ತಲಪುತ್ತಿದ್ದಂತೆ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯ ಮಂಟಪ ಮುನ್ನಡೆಗೆ ಚಾಲನೆ ನೀಡಿತು. ಈ ಎರಡು ಮಂಟಪಗಳ ಹಿಂದೆ ಸರದಿಯಂತೆ ಇತರ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಂಟಪಗಳು ಸಿದ್ದಾಪುರ ರಸ್ತೆಯ ತಿರುವಿಗೆ ಬರುವಷ್ಟರಲ್ಲಿ ಬೆಳಗಿನ 3ಗಂಟೆ ಕಳೆದಿತ್ತು.

ಇಪ್ಪತ್ತು ಮಂಟಪಗಳ ಪೈಕಿ ಕೆಲವು ಮಂಟಪಗಳು ಎಂಟು ಅಡಿಗಳಿಂದ ಹತ್ತು ಅಡಿಗಳವರೆಗೆ ದುಂದು ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಮಂಗಳೂರಿನಿಂದ ತರಿಸಿ ಮೆರವಣೆಗೆಯಲ್ಲಿ ಭಾಗವಹಿಸಿದ್ದವು ಗಣಪತಿ ದೇವಾಲಯ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಸಿಡಿ ಮದ್ದು ಪ್ರದರ್ಶನ ಇತರ ಎಲ್ಲ ಮನರಂಜನೆಯನ್ನು ಕೈ ಬಿಡಲಾಗಿತ್ತು. ಸುಮಾರು ಹದಿನಾಲ್ಕು ಮಂಟಪಗಳು ಡಿ.ಜೆ. ಸೌಂಡ್ ಸಿಸ್ಟಮ್ ವ್ಯವಸ್ಥೆಗೊಳಿಸಿದ್ದರಿಂದ ವೀಕ್ಷಕರು ಡ್ಯಾನ್ಸ್ ನೊಂದಿಗೆ ಇದನ್ನು ಮನರಂಜನೆಯಾಗಿ ಅನುಭವಿಸಿದರು.

ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ವೀಣಾ ನಾಯಕ್ ಅವರ ಉಸ್ತುವಾರಿಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್‍ನಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಗಳು, ಮಹಿಳಾ ಪೊಲೀಸರು, ಹೋಮ್ ಗಾರ್ಡ್‍ಗಳು, ಹೊರಗಿನ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಇಪ್ಪತ್ತೊಂದು ಉತ್ಸವ ಸಮಿತಿಗಳಲ್ಲಿ ಗೌರಿಕೆರೆಯ ಗಣಪತಿ ಸೇವಾ ಸಮಿತಿ ತಾ. 9ರಂದು ಮೂರ್ತಿಯನ್ನು ತುರ್ತಾಗಿ ವಿಸರ್ಜಿಸಿದ್ದರಿಂದ ಮೆರವಣಿಗೆಯಲ್ಲಿ ಇಪ್ಪತ್ತು ಉತ್ಸವ ಸಮಿತಿಗಳು ಮಾತ್ರ ಭಾಗವಹಿಸಬೇಕಾಯಿತು.

ಈ ಬಾರಿ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಸ್ಥಾನದ ಗಣಪತಿ ಸೇವಾ ಟ್ರಸ್ಟ್, ಜೈನರಬೀದಿಯ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿ, ದಖ್ಖನಿಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ನೆಹರೂನಗರದ ನೇತಾಜಿ ಉತ್ಸವ ಸಮಿತಿ, ಪಂಜರಪೇಟೆ ಗಣಪತಿಬೀದಿಯ ಮಹಾಗಣಪತಿ ಸೇವಾ ಸಂಘ, ಪಂಜರ್‍ಪೇಟೆ ಮುಖ್ಯ ರಸ್ತೆಯ ವಿನಾಯಕ ಸೇವಾ ಸಮಿತಿ, ಇಲ್ಲಿನ ಚಿಕ್ಕಪೇಟೆಯ ಆಂಜನೇಯ ದೇವಸ್ಥಾನದ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ,ಸುಣ್ಣದ ಬೀದಿ ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಇಲ್ಲಿನ ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಅಯ್ಯಪ್ಪಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯಸ್ವಾಮಿ ರಸ್ತೆಯ ಬಾಲಂಜನೇಯ ವಿನಾಯಕ ಉತ್ಸವ ಸಮಿತಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರ ನೌಕರರ ಸೇವಾ ಸಂಘದ ಗಣಪತಿ ಸೇವಾ ಸಮಿತಿ ಸೇರಿದಂತೆ 20 ಉತ್ಸವ ಸಮಿತಿಗಳು ಹನ್ನೊಂದು ದಿನಗಳ ಉತ್ಸವ ಆಚರಣೆ ಹಾಗೂ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

-ಡಿ.ಎಂ.ಆರ್