ಮಡಿಕೇರಿ, ಸೆ. 13: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಎರಡು ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ತಾ. 14ರಂದು (ಇಂದು) ವೈಭವದಿಂದ ಜರುಗಲಿದೆ.
ವರ್ಷಂಪ್ರತಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಸರ್ಜನೋತ್ಸವದಂದು ದಸರಾ ಉತ್ಸವದಂತೆ ಚಲನ- ವಲನಗಳನ್ನೊಳಗೊಂಡ ಭಕ್ತಿಪ್ರಧಾನ ಸಾರಾಂಶವುಳ್ಳ ಕಥಾಹಂದರದ ಶೋಭಾಯಾತ್ರೆ ಹಮ್ಮಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘದ ಗಣೇಶ ವಿಸರ್ಜನೋತ್ಸವ ನಡೆಯಲಿದೆ. ಇದರೊಂದಿಗೆ ಈ ಬಾರಿ ಸಿದ್ದಾಪುರ ರಸ್ತೆಯಲ್ಲಿರುವ ಅಶೋಕಪುರ ಶ್ರೀ ಗಣಪತಿ ಉತ್ಸವ ಸಮಿತಿಯ ವಿಸರ್ಜನೋತ್ಸವ ಕೂಡ ನಡೆಯಲಿದೆ.
ಗಜಾಸುರ ಸಂಹಾರ
41ನೇ ವರ್ಷದ ಉತ್ಸವ ಆಚರಿಸುತ್ತಿರುವ ಶಾಂತಿನಿಕೇತನ ಯುವಕ ಸಂಘದ ಈ ಬಾರಿಯ ಶೋಭಾಯತ್ರೆಯ ಉತ್ಸವ ಮಂಟಪದಲ್ಲಿ ಗಣೇಶ ಪುರಾಣದಿಂದ ಆಯ್ದ ‘ಗಣಪತಿಯಿಂದ ಗಜಾಸುರನ ಸಂಹಾರ’ ಕಥಾ ಸಾರಾಂಶವನ್ನು ಅಳವಡಿಸಲಾಗಿದೆ. ಮಡಿಕೇರಿಯ ಕಲಾವಿದ ಪಿ.ಎ. ರವಿ ಹಾಗೂ ತಂಡದವರು ಕಲಾಕೃತಿಗಳನ್ನು ರಚಿಸಿದ್ದಾರೆ. ವಿಜಯ್ ಹಾಗೂ ವಿನು ತಂಡದವರು ಚಲನ-ವಲನದ ಜವಾಬ್ದಾರಿ ವಹಿಸಿಕೊಂಡಿದ್ದು, ಗುರುಲೈಟಿಂಗ್ಸ್‍ನ ಲೋಕೇಶ್ ಹಾಗೂ ತಂಡ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್ಸ್ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನ ಆರ್.ಜೆ.ಚೆಕ್ ತಂಡದಿಂದ ಕೂಲ್‍ಫೈರ್ ಪ್ರದರ್ಶನ ಇರಲಿದೆ. ಪೂಜಾ ಲೈಟಿಂಗ್ಸ್‍ನವರಿಂದ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಕಥಾ ಸಂಕಲನದ ಜವಾಬ್ದಾರಿಯನ್ನು ಆರ್.ಬಿ. ರವಿ ಹಾಗೂ ಸಂತೋಷ್ ನಿರ್ವಹಿಸಲಿದ್ದಾರೆ.
ಮೂರು ಟ್ರ್ಯಾಕ್ಟರ್‍ಗಳಲ್ಲಿ ಅಳವಡಿಸಲಾಗಿರುವ ಅದ್ಧೂರಿ ಮಂಟಪದ ಶೋಭಾಯಾತ್ರೆ ಸಂಜೆ 6.30ಕ್ಕೆ ಹೊರಡಲಿದ್ದು, ಸಾರ್ವಜನಿಕರಿಗಾಗಿ ಶಾಂತಿನಿಕೇತನ ಬಡಾವಣೆಯಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ. ನಂತರ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ, ಚಿಕ್ಕಪೇಟೆ, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಕನ್ನಿಕಾಪರಮೇಶ್ವರಿ ದೇವಾಲಯ ಬಳಿ, ಬಸವೇಶ್ವರ ದೇವಾಲಯ ಬಳಿ ಸೇರಿದಂತೆ ಆಯ್ದ ಕೆಲವು ಕಡೆಗಳಲ್ಲಿ ಪ್ರದರ್ಶನದೊಂದಿಗೆ ತೆರಳಿ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವದೆಂದು ಯುವಕ ಸಂಘದ ಅಧ್ಯಕ್ಷ ಚೇತನ್ ತಿಳಿಸಿದ್ದಾರೆ.
ಯಮನ ಗರ್ವಭಂಗ
ಸುಮಾರು 44 ವರ್ಷ ಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿರುವ ಅಶೋಕಪುರ ಗಣಪತಿ ಉತ್ಸವ ಸಮಿತಿಯು ಈ ಬಾರಿ 45ನೇ ವರ್ಷದ ಗಣೇಶೋತ್ಸವ ಆಚರಿಸುತ್ತಿದೆ. ಅಶೋಕಪುರದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ 13 ದಿನಗಳ ಕಾಲ ಪೂಜಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದ್ದು, ರಂಗಪೂಜೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ತಾ. 14ರಂದು (ಇಂದು) ಗಣೇಶ ಪುರಾಣದಿಂದ ಆಯ್ದ ‘ಆದಿ ಪೂಜಿತ ಗಣೇಶನಿಂದ ಯಮನ ಗರ್ವಭಂಗ’ ಎಂಬ ಕಥಾ ಸಾರಾಂಶ ಹಾಗೂ ಚಲನವಲನಗಳನ್ನು ಒಳಗೊಂಡ ಉತ್ಸವ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ವಾದ್ಯಗೋಷ್ಠಿಗಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಕೊಂಡೊಯ್ದು ಗೌರಿಕೆರೆಯಲ್ಲಿ ವಿಸರ್ಜಿಸಲಾಗುವದು. ಚಲನವಲನಗಳ ವ್ಯವಸ್ಥೆಯನ್ನು ಅರ್ಜುನ್, ವಿಕ್ರಂ, ಯತೀಶ್, ವಿದ್ಯಾಧರ ಸಂಘದ ಸದಸ್ಯ ತಂಡದವರು, ಸ್ಟುಡಿಯೋ ಸೆಟ್ಟಿಂಗನ್ನು ಅವೀನ್‍ಕುಮಾರ್, ಮಂಟಪದ ಸಂಪೂರ್ಣ ಜವಾಬ್ದಾರಿಯನ್ನು ಅಧ್ಯಕ್ಷ ಲಾರೆನ್ಸ್ ಮತ್ತು ಸುನೀಲ್ ವಹಿಸಿಕೊಂಡಿದ್ದಾರೆ ಮತ್ತು ದಿಂಡಿಗಲ್‍ನಿಂದ ಲೈಟಿಂಗ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗೌರವಾಧ್ಯಕ್ಷ ಹೆಚ್.ಎಲ್. ರಮೇಶ್ ಮತ್ತು ಧರ್ಮೇಂದ್ರ ತಿಳಿಸಿದ್ದಾರೆ.