ಸಿದ್ದಾಪುರ, ಸೆ. 13: ಕಾವೇರಿ ನದಿ ನೀರಿನ ಪ್ರವಾಹಕ್ಕೆ ಮನೆ ಕಳೆದು ಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ನೆಲ್ಲಿಹುದಿಕೇರಿ ಸಂತ್ರಸ್ತ ಮಹಿಳೆಯರಿಗೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ವತಿಯಿಂದ ವೃತ್ತಿ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿ ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಮಹಿಳೆಯರೊಂದಿಗೆ ಚರ್ಚಿಸಿ ಎಂಬ್ರಾಯಿಡರಿ ತರಬೇತಿ ಉಚಿತ ನೀಡುವದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ನೆಲ್ಲಿಹುದಿಕೇರಿ ಪ್ರೌಢಶಾಲಾ ಸಭಾಂಗಣದಲ್ಲಿ ತರಬೇತಿ ಪ್ರಾರಂಭಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತರಬೇತಿ ನೀಡಲಾಗುತ್ತಿದ್ದು, 36 ಜನ ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ.
ಎಂಬ್ರಾಯಿಡರಿ ತರಬೇತಿ ನೀಡುವ ಸಲುವಾಗಿ ಮಡಿಕೇರಿಯ ಶಿವಾನಿ ಗಾರ್ಮೆಂಟ್ಸ್ ಮಾಲಕಿ ಹಾಗೂ ಎನ್.ಸಿ. ರೂಪಾವತಿ ಅವರನ್ನು ನೇಮಕ ಮಾಡಲಾಗಿದೆ. ಅವರು ದಿನವೂ ಮಡಿಕೇರಿಯಿಂದ ಬಂದು ತರಬೇತಿ ನೀಡುತ್ತಿದ್ದಾರೆ. ತರಬೇತಿಗೆ ಬೇಕಾದ ಬಟ್ಟೆ, ಗೋಲ್ಡನ್ ಥ್ರೆಡ್, ಕ್ರೋಶಾ, ಮೇಟಿ ಥ್ರೆಡ್, ಸೂಜಿ, ಫ್ಯಾಶನ್ ಹರಳು, ಟಿಕ್ಕಲ್ಸ್, ಫ್ರೇಮ್, ಸಿಲ್ಕ್ ಥ್ರೆಡ್ ಮುಂತಾದ ವಸ್ತುಗಳನ್ನು ಸ್ವಾಮೀಜಿ ಅವರೇ ಖರೀದಿಸಿ ನೀಡಿದ್ದು, ಯಾವದೇ ವಸ್ತುಗಳನ್ನು ಶಿಬಿರಾರ್ಥಿಗಳು ಕೊಂಡುಕೊಳ್ಳುವ ಅಗತ್ಯತೆ ಇಲ್ಲ.
ಕಳೆದ ವರ್ಷದ ಪ್ರವಾಹದಿಂದ ಸಂತ್ರಸ್ತರಾಗಿದ್ದವರಿಗೆ ಉಚಿತ ಟೈಲರಿಂಗ್ ತರಬೇತಿಯನ್ನು ನೀಡಲಾಗಿತ್ತು. ತರಬೇತಿಯ ಬಳಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುವದಾಗಿ ಸ್ವಾಮೀಜಿ ತಿಳಿಸಿದ್ದಾರೆ. ನೆಲ್ಲಿಹುದಿಕೇರಿಯ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತ ಮಹಿಳೆಯರಿಗೂ ಹೊಲಿಗೆ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಗಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಮೂರು ತಿಂಗಳ ತರಬೇತಿಯ ಬಳಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರಿಗೆ ಉಚಿತ ಹೊಲಿಗೆ ಯಂತ್ರ ನೀಡಲಾಗುವದು ಎಂದು ಸ್ವಾಮೀಜಿ ತಿಳಿಸಿದ್ದಾರೆ.