ಗೋಣಿಕೊಪ್ಪ ವರದಿ, ಸೆ. 13: ಕಾಳು ಮೆಣಸು ಆಮದು ವಿಚಾರದಲ್ಲಿ ಕೊಡಗಿನ ರೈತರು ಅನುಭವಿಸುತ್ತಿರುವ ನಷ್ಟದ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೆÉೀಟಿ ಮಾಡಿ ಮನವರಿಕೆ ಮಾಡಲು ಪ್ರಯತ್ನಿಸುವದಾಗಿ ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಕೆ. ಸೋಮಣ್ಣ ತಿಳಿಸಿದ್ದಾರೆ.

ವಿಯೆಟ್ನಾಂ ಮೂಲದ ಕಾಳುಮೆಣಸು ಶ್ರೀಲಂಕಾ ಮಾರ್ಗವಾಗಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತ ದೇಶಕ್ಕೆ ಆಮದು ಆಗಿರುವ ಬಗ್ಗೆ ಮಾಹಿತಿ ಇದೆ. ಇದರಿಂದ ದರ ಇಳಿಕೆಯಾಗಿ ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ರೈತರು ನಷ್ಟ ಅನುಭವಿಸುವಂತಾಗಿದೆ. ರೈತರ ಸಂಕಷ್ಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತಲುಪಿಸುವ ಪ್ರಯತ್ನದ ಮೂಲಕ ರೈತಪರ ಹೋರಾಟ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಸಂಸದ ಪ್ರತಾಪ್‍ಸಿಂಹ ಅವರು ಕೇಂದ್ರಕ್ಕೆ ಕೊಡಗಿನ ಸಮಸ್ಯೆಯನ್ನು ಬಿಂಬಿಸುವ ಜವಾಬ್ದಾರಿ ಸ್ಥಾನವನ್ನು ಮರೆತಿದ್ದಾರೆ ಎಂದು ಆರೋಪಿಸಿದರು.

700 ಟನ್ ಕಾಳುಮೆಣಸು ಆಮದುವಿನಿಂದ ದರ ಇಳಿಕೆ ಪರಿಣಾಮ ಎದುರಿಸುವಂತಾಗಿದೆ. ಪ್ರತೀ ಕೆ.ಜಿ. ಗೆ ರೂ. 700 ಇದ್ದ ಬೆಲೆ ಮೆಣಸು ರೂ. 300 ಕ್ಕೆ ಇಳಿದಿದೆ. ಅತೀವಷ್ಠಿಯಿಂದ ನಷ್ಟದಲ್ಲಿರುವ ರೈತನ ಪರವಾಗಿ ಸಂಸದರು ಕಾರ್ಯನಿರ್ವಹಿಸುತ್ತಿಲ್ಲ. ಆಮದುವಿನಿಂದ ಆಗುತ್ತಿರುವ ದುಷ್ಪರಿಣಾಮವನ್ನು ಪ್ರಧಾನಮಂತ್ರಿಗೆ ತಲುಪಿಸುವ ಪ್ರಯತ್ನ ಸಂಸದ ಮಾಡುತ್ತಿಲ್ಲ. ಇದರಿಂದ ನಾವೇ ನಿಯೋಗ ತೆರಳಿ ಪ್ರಧಾನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುವದಾಗಿ ತಿಳಿಸಿದರು.

ರೈತರ ಹೊಟ್ಟೆಗೆ ಹೊಡೆದು ರಾಜಕೀಯ ಮಾಡುವ ರಾಜಕಾರಣ ಯಾರೂ ಮಾಡಬಾರದು. ಆಮದು ನೀತಿಯನ್ನು ಸಂಪೂರ್ಣವಾಗಿ ತಡೆಹಿಡಿಯಲು ಕೇಂದ್ರ ಮುಂದಾಗಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪ್ರಮುಖರಾದ ಕೋಟ್ರಂಗಡ ನಿತಿನ್ ಪೊನ್ನಣ್ಣ, ಮಾದೀರ ಸುದಿ, ಕರ್ತಂಡ ಸೋಮಣ್ಣ, ಕೊಣಿಯಂಡ ಮುತ್ತಣ್ಣ ಉಪಸ್ಥಿತರಿದ್ದರು.