ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಚಿತ್ರಣವೇ ಈಗಲೂ ಮುಂದುವರಿಯುತ್ತಿದೆ. ವರುಣನ ರಭಸ ತುಸು ಇಳಿಮುಖಗೊಂಡಿದೆಯಾದರೂ ಇನ್ನೂ ನೇಸರನ ಕಿರಣಗಳು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಆಗಿಂದಾಗೆ ಬಿಡುವು ದೊರಕುತ್ತಿದ್ದರೂ ಮತ್ತೆ ಮತ್ತೆ ಮಳೆ ಸುರಿಯುತ್ತಲೇ ಇದೆ. ಇದೀಗ ಸೆಪ್ಟೆಂಬರ್ ಎರಡನೇ ವಾರ ಕಳೆಯುತ್ತಾ ಬರುತ್ತಿದ್ದರೂ, ಕೊಡಗು ಮಾತ್ರ ಮಳೆಗಾಲದ ಛಾಯೆಯಿಂದ ಇನ್ನೂ ಹೊರಬಂದಂತಿಲ್ಲ.

ಪ್ರಸ್ತುತ ಕೊಡಗು ಜಿಲ್ಲೆಯ ಸರಾಸರಿ ಮಳೆ ನೂರು ಇಂಚು ಗಡಿದಾಟುವದರೊಂದಿಗೆ ಶತಕ ಬಾರಿಸಿದೆ.(!) ತಾ. 12ರ ತನಕ ಕೊಡಗು ಜಿಲ್ಲೆಗೆ ಸರಾಸರಿ 103.92 ಇಂಚಿನಷ್ಟು (2598.22 ಮಿ.ಮೀ.) ಮಳೆ ಸುರಿದಿದೆ. ಇದು ಜನವರಿಯಿಂದ ಈ ದಿನದವರೆಗಿನ ಅಂಕಿ ಅಂಶವಾಗಿದೆ. ಆದರೆ ಇಲ್ಲಿ ಗಮನಾರ್ಹ ವಿಚಾರವೆಂದರೆ ಆಗಸ್ಟ್ ತಿಂಗಳ ತನಕಗೂ ಜಿಲ್ಲೆ ಬರಗಾಲದಂತಹ ಸನ್ನಿವೇಶವನ್ನು ಕಂಡಿದ್ದು, ಕೇವಲ 42 ದಿನಗಳ ಅವಧಿಯಲ್ಲಿ ಮಳೆ ತನ್ನ ಪ್ರತಾಪವನ್ನು ತೋರಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆ ಕಂಡುಬಂದರೂ 2018ರಲ್ಲಿ ಬೇಸಿಗೆಯ ಸಂದರ್ಭದಿಂದಲೇ ಜಿಲ್ಲೆ ಹೆಚ್ಚು ಮಳೆಯನ್ನು ಕಂಡಿತು. ಆದರೆ ಈ ಬಾರಿ ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿದರೆ ಜಿಲ್ಲೆಯಾದ್ಯಂತ ಜುಲೈ ಅಂತ್ಯದ ತನಕಗೂ ಬೇಸಿಗೆಯ ರೀತಿಯ ವಾತಾವರಣವೇ ಎದುರಾಗಿತ್ತು. ಕೆಲವೇ ಕ್ಷಣಗಳ ಅಂತರದಲ್ಲಿ ವಾತಾವರಣದಲ್ಲಿ ಬದಲಾವಣೆ ಕಾಣುತ್ತಿರುವದು ಇನ್ನೂ ಮುಂದುವರಿಯುತ್ತಿದೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 0.59 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಮಳೆಯ ಪ್ರಮಾಣ ಕೇವಲ ನಾಲ್ಕು ಸೆಂಟ್‍ನಷ್ಟು ಮಾತ್ರವಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1.38 ಇಂಚು ಸರಾಸರಿ ಮಳೆಯಾಗಿದ್ದರೆ, ವೀರಾಪೇಟೆಯಲ್ಲಿ 0.11 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.28 ಇಂಚು ಸರಾಸರಿ ಮಳೆಯಾಗಿದೆ. 2018ರಲ್ಲಿ ಈ ದಿನದಂದು ಮಡಿಕೇರಿ ತಾಲೂಕಿನಲ್ಲಿ 0.12, ವೀರಾಜಪೇಟೆಯಲ್ಲಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯಾಗಿರಲಿಲ್ಲ.

ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿನಲ್ಲಿ 138.93 ಇಂಚು, ವೀರಾಜಪೇಟೆಯಲ್ಲಿ 101.87 ಹಾಗೂ ಸೋಮವಾರಪೇಟೆಯಲ್ಲಿ 70.96 ಇಂಚು ಮಳೆಯಾಗಿದೆ.

ಭರ್ತಿಯಾಗಿರುವ ಹಾರಂಗಿ

ಪ್ರಸ್ತುತ ಹಾರಂಗಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ನಿಂತಿದೆ. 2859 ಅಡಿಯಷ್ಟು ಗರಿಷ್ಟ ಮಟ್ಟ ಹೊಂದಿರುವ ಜಲಾಶಯದಲ್ಲಿ 2858.24 ಅಡಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದು 2856 ಅಡಿ ಇತ್ತು. ಜಲಾಶಯಕ್ಕೆ 3508 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೆ, ಕಳೆದ ಬಾರಿ ಈ ಪ್ರಮಾಣ 1800 ಕ್ಯೂಸೆಕ್ಸ್ ಇತ್ತು. ಪ್ರಸ್ತುತ ಜಲಾಶಯದಿಂದ ನದಿಗೆ 1785 ಕ್ಯೂಸೆಕ್ಸ್ ಹಾಗೂ ನಾಲೆಗೆ 1000 ಕ್ಯೂಸೆಕ್ಸ್ ನೀರು ಹರಿದು ಬಿಡಲಾಗುತ್ತಿದೆ. ಕಳೆದ ವರ್ಷ ಈ ಪ್ರಮಾಣ ನದಿಗೆ 0 ಹಾಗೂ ನಾಲೆಗೆ 1600 ಕ್ಯೂಸೆಕ್ಸ್‍ನಷ್ಟಿತ್ತು.