ಪೆರಾಜೆ, ಸೆ. 12: ದೂರದಿಂದ ಕಣ್ಣಾಯಿಸಿದರೆ ಸುಂದರವಾದ, ರಮಣೀಯ ಬೆಟ್ಟಶ್ರೇಣಿ ಕಾಣುತ್ತದೆ... ಹತ್ತಿರ ಹೋಗಬೇಕಾದರೆ ಆರೇಳು ಕಿ.ಮೀ. ಬೆಟ್ಟದಂತಿರುವ ಬೆಟ್ಟದ ಮೇಲಿನ ರಸ್ತೆಯಲ್ಲಿ ಸಾಗಬೇಕು... ಅಲ್ಲಿಂದ ನಾಲ್ಕೈದು ಕಿ.ಮೀ. ಕಾಡು, ತೋಟ, ತೊರೆಗಳನ್ನು ದಾಟಿ ಮೇಡನ್ನೇರಿ ಹೋಗಬೇಕು... ಹೋಗುತ್ತಾ... ಹೋಗುತ್ತಾ ಬೆಟ್ಟದ ಮೇಲೆ ಕಾಣುವದೆಲ್ಲ ಕಲ್ಲುಗಳೇ... ಕಲ್ಲುಗಳಿಂದಲೇ ಕೂಡಿರುವ ಬೆಟ್ಟದ ತಪ್ಪಲಿನಲ್ಲಿ ಒಂದಷ್ಟು ಮನೆಗಳು..., ಪರಿಸರ ಅಷ್ಟೊಂದು ರಮಣೀಯವಾಗಿದ್ದರೂ ಇದೀಗ ಒಂಥರಾ ಆತಂಕ, ಬೆಟ್ಟದ ಮೇಲಿರುವ ಬಂಡೆ ಕಲ್ಲುಗಳು ಜಾರಿಕೊಂಡು ಕೆಳಗೆ ಬರುತ್ತಿರುವದು ಅಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಉರುಳಿ ಬಂದ ಬಂಡೆಗಳು ಅರ್ಧದಲ್ಲಿ ಮರಗಳಿಗೆ ತಾಗಿ ನಿಂತಿರುವದು ತೀರಾ ಅಪಾಯಕಾರಿಯಾಗಿದೆ.

ಕೋಳಿಕಲ್ಲು ಮಲೆ ಬೆಟ್ಟ... ಇದು ಇರುವದು ಜಿಲ್ಲೆಯ ಗಡಿಗ್ರಾಮ ಪೆರಾಜೆಯಲ್ಲಿ. ಪೆರಾಜೆ ಗ್ರಾಮ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿದೆ. ಗಡಿಭಾಗ ಅನ್ನೋದಕ್ಕಿಂತ ಕೊಡಗಿನ ಗಡಿ ದಾಟಿ ಅದೆಷ್ಟೋ ದೂರ ಸಾಗಿದ ಮೇಲೆ ಸುಳ್ಯಕ್ಕೆ 8 ಕಿ.ಮೀ. ಇರುವಾಗ ಈ ನಮ್ಮ ಪೆರಾಜೆ ಗ್ರಾಮ ಸಿಗುತ್ತದೆ. ಭೂ ನಕಾಶೆಯಲ್ಲಿ ಪೆರಾಜೆ ಕೊಡಗು ಜಿಲ್ಲೆಯ ಭಾಗವಾಗಿದ್ದರೂ, ಇಲ್ಲಿನ ಹವಾಗುಣ, ವಾತಾವರಣ, ಎಲ್ಲವೂ ದಕ್ಷಿಣ ಕನ್ನಡ ಜಿಲ್ಲೆಗೆ ಸಾಮಿಪ್ಯವಾಗಿವೆ. ಜನಜೀವನ ಕೂಡ ಅಲ್ಲಿಗೇ ಆತುಕೊಂಡಿದೆ. ಕೇವಲ ಕಚೇರಿ ಕೆಲಸಗಳಿಗಷ್ಟೇ ಮಡಿಕೇರಿ ಕಂದಾಯ ವ್ಯಾಪ್ತಿಯನ್ನು ಹೊಂದಿರುವ ಗ್ರಾಮವಾಗಿದೆ. ಈ ಗ್ರಾಮ ವ್ಯಾಪ್ತಿಯಲ್ಲಿದೆ ಈ ಸುಂದರ ಕೋಳಿಕಲ್ಲು ಮಲೆ...! ಈ ಕೋಳಿಕಲ್ಲು ಮಲೆ ಎಂಬ ಬೆಟ್ಟದ ತಪ್ಪಲಿನಲ್ಲಿ ಹಲವಾರು ಕುಟುಂಬಗಳು ನೆಲೆಸಿವೆ. ಈ ಪ್ರದೇಶಗಳ ಹೆಸರು ಕುಂಡಾಡು, ವಾಮಕಜೆ, ಬಂಗಾರಕೋಡಿ.

ಉರುಳಿದ ಬಂಡೆ

ಇಲ್ಲಿನವರು ಎಷ್ಟು ವರ್ಷಗಳಿಂದ ನೆಲೆಸಿದ್ದಾರೆಂಬದು ಈಗಿನವರಿಗೆ ಸರಿಯಾಗಿ ತಿಳಿದಿಲ್ಲ. ಆದರೂ ಅದೆಷ್ಟೋ ವರ್ಷಗಳಿಂದ ಇಲ್ಲಿ ನೆಲೆಕಂಡು ಕೊಂಡಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ನೆಲೆನಿಂತ ಮರಾಟಿ ನಾಯಕ್ ಜನಾಂಗದವರು 40ರಿಂದ 50 ಕುಟುಂಬದ ವರಾಗಿದ್ದಾರೆ. ಇನ್ನುಳಿದವರೆಲ್ಲರೂ ಅರೆಭಾಷೆ ಗೌಡ ಜನಾಂಗದವರಾಗಿದ್ದಾರೆ. ಇಷ್ಟು ವರ್ಷದವರೆಗೆ ಇವರೆಲ್ಲರೂ ನೆಮ್ಮದಿಯಾಗಿಯೇ ಜೀವನ ಸಾಗಿಸುತ್ತಿದ್ದರು. ಕಳೆದ ವರ್ಷ ಜೋಡುಪಾಲದವರೆಗೂ, ಸುಬ್ರಹ್ಮಣ್ಯ ಪ್ರದೇಶದ ಸುತ್ತಮುತ್ತ ಭೂಕಂಪನದೊಂದಿಗೆ ಮಳೆಗಾಲದಲ್ಲಿ ಭೂಕುಸಿತ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಈ ಬೆಟ್ಟದ ಬಂಗಾರಕೋಡಿ ಎಂಬಲ್ಲಿ ಭಾರೀ ಜಲಸ್ಫೋಟ ದೊಂದಿಗೆ ಚಿಮ್ಮಿದ ನೀರು ತೆಂಗಿನ ಮರದೆತ್ತರಕ್ಕೆ ಏರಿದೆ. ಈ ವರ್ಷ ದಕ್ಷಿಣ ಕೊಡಗು, ಸೇರಿದಂತೆ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿಯಾಗಿದೆ. ಇದರೊಂದಿಗೆ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ನೀಡಿದೆ. ಇದೇ ವೇಳೆಯಲ್ಲಿ ಈ ಬೆಟ್ಟದಲ್ಲೂ ಬೃಹತ್ ಗಾತ್ರದ ಬಂಡೆಕಲ್ಲುಗಳು ಉರುಳಿವೆ.

ಉರುಳಿದ್ದೇ ಗೊತ್ತಿಲ್ಲ...!

ಬೆಟ್ಟದ ಇನ್ನೊಂದು ಭಾಗವಾದ ಅರೆಕಲ್ಲ್ಲು ಪ್ರದೇಶದ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ಮೊದಲಿಗೆ ಬಂಡೆಗಳು ಉರುಳಿವೆ. ನಂತರದಲ್ಲಿ ಕುಂಡಾಡು ಚಾಮಕಜೆಯಲ್ಲಿಯೂ ಬಂಡೆಗಳು ಉರುಳಿವೆ.

(ಮೊದಲ ಪುಟದಿಂದ) ಈ ಪ್ರದೇಶದ ತಪ್ಪಲಲ್ಲಿ ತೊರೆಯೊಂದು ಹರಿಯುತ್ತಿದ್ದು, ನೀರಿನ ಹರಿವಿನ ಶಬ್ಧಕ್ಕೆ ಕೇಳಭಾಗದಲ್ಲಿರುವ ಮನೆಯವರಿಗೆ ಬಂಡೆ ಉರುಳಿದ ವಿಚಾರವೇ ಗೊತ್ತಾಗಲಿಲ್ಲ. ಬೆಟ್ಟದ ಎದುರು ಭಾಗದಲ್ಲಿರುವ ನಿವಾಸಿಗಳಿಗೆ ಏನೋ ಶಬ್ಧ ಕೇಳಿದೆ. ಮರುದಿನ ಗ್ರಾಮದ ಯುವಕರು ಹೋಗಿ ನೋಡಿದಾಗ ಬಂಡೆಗಳು ಉರುಳಿರುವದು ಗೋಚರಿಸಿದೆ.

ಮರದಿಂದ ತಡೆ...!

ಭಾಗಮಂಡಲ ವಲಯ ಅರಣ್ಯ ಪ್ರದೇಶಕ್ಕೆ ಸೇರಿರುವ ಬೆಟ್ಟದ ಕಾಡಿನಲ್ಲಿರುವ ಬಂಡೆಗಳು ಉರುಳಿ ಬಂದಿವೆ. ಉರುಳಿದ ಬಂಡೆಗಳು ದುಂಡಾಕಾರದಲ್ಲಿದ್ದಿದ್ದರೆ ಕೆಳಭಾಗಕ್ಕೆ ಉರುಳಿ ಅಲ್ಲಿರುವ ಮನೆಗಳಿಗೆ ಅಪ್ಪಳಿಸುವದರೊಂದಿಗೆ ಜೀವ ಹಾನಿಯಾಗುವ ಸಂಭವ ಕೂಡ ಇತ್ತು. ಆದರೆ ಚಪ್ಪಟೆಯಾಕಾರದ ಬಂಡೆಗಳು ಜಾರಿ ಬಂದಿದ್ದು, ಅರಣ್ಯದಲ್ಲಿರುವ ಮರಕ್ಕೆ ತಾಗಿ ನಿಂತಿದೆ. ಒಂದು ವೇಳೆ ಕಲ್ಲು ಮರದಿಂದ ಬೇರ್ಪಟ್ಟು ಮತ್ತೆ ಜಾರಿದರೆ ಅಪಾಯ ತಪ್ಪಿದಲ್ಲ.

ಇದುವರೆಗೆ ಕಂಡಿಲ್ಲ!

ಇಲ್ಲಿನವರು ಅದೆಷ್ಟೋ ವರ್ಷಗಳಿಂದ ನೆಲಿಸಿದ್ದರೂ, ಈವರೆಗೆ ಇಂತಹ ದೃಶ್ಯವನ್ನು ಗಮನಿಸಿಲ್ಲ, ಕಂಡಿದ್ದೂ ಇಲ್ಲವಂತೆ ‘ಶಕ್ತಿ’ಯೊಂದಿಗೆ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದ ಅಲ್ಲಿನ ನಿವಾಸಿಗಳಾದ ನಾಗೇಶ್, ಅನಿಲ್ ಕುಂಬಳಚೇರಿ, ಹರ್ಷಿತ್ ಮಜಿಕೋಡಿ ಅವರುಗಳು ಹೇಳುವಂತೆ ‘ಸದ್ದು ಕೇಳಿ ನಾವುಗಳು ಬಂದು ನೋಡುವಾಗ ಈ ರೀತಿಯಲ್ಲಿ ಬಂಡೆಗಳು ಉರುಳಿ ರುವದು ಕಂಡುಬಂದಿದೆ. ಬಂಡೆಗಳು ಜಾರಿದ ಜಾಗದಲ್ಲಿ ನೀರು ಕೂಡ ಹರಿಯುತ್ತಿತ್ತು. ಇದೀಗ ಇಲ್ಲವಾಗಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಆಗಿರಲಿಲ್ಲ, ಇನ್ನೂ ಮೇಲ್ಭಾಗದಲ್ಲಿ ಏನೂ ಆಗಿದೆಯೋ ಗೊತ್ತಿಲ್ಲ. ಅತ್ತ ಕಡೆ ನಾವ್ಯಾರೂ ಹೋಗಿಲ್ಲ’ ಎಂದು ಹೇಳುತ್ತಾರೆ.

ಅಪಾಯ ತಪ್ಪಿದಲ್ಲ...!

ಇನ್ನೂ ಉರುಳಿ ಬಂದಿರುವ ಬಂಡೆಗಳು ಸದ್ಯಕ್ಕೆ ಮರಗಳ ಬುಡದಲ್ಲಿ ಬಿದ್ದಿವೆ. ಮರ ವಾಲಿದರೆ ಅಥವಾ ಮಳೆ - ಗಾಳಿ, ಶೀಥಕ್ಕೆ ಮಣ್ಣು ಸಡಿಲ ಗೊಂಡು ಬಂಡೆಯೇನಾದರೂ ಮತ್ತೆ ಜಾರಿದರೆ ಕೆಳಗಡೆ ಇರುವ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಅಲ್ಲದೆ ಕೆಳಭಾಗ ದಲ್ಲಿ ಅಡಿಕೆ, ತೆಂಗು ತೋಟಗಳಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದರೆ ಏನಾಗಬಹುದೆಂದು ಹೇಳಲಾಗದು.

ತೆರವಾಗಬೇಕು

ಸದ್ಯದ ಮಟ್ಟಿಗೆ ಬಂಡೆಗಳೇನೋ ಮರದ ಬುಡದಲ್ಲಿ ನಿಂತಿವೆ. ಯಾವಾಗ ಏನಾಗಬಹುದೋ ಯಾರೂ ಊಹಿಸಲಾಗದು. ಈಗಾಗಲೇ ಕಳೆದ ವರ್ಷದಿಂದ ಭೂಕುಸಿತದಿಂದ ಅದೆಷ್ಟೋ ಸಾವು - ನೋವು ಸಂಭವಿಸಿವೆ. ಇದೀಗ ಇಲ್ಲಿ ಅಪಾಯ ವಿದೆ ಎಂಬ ಸುಳಿವು ಲಭಿಸಿದೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಂಡೆ ಜಾರುವಿಕೆಗೆ ಕಾರಣ ಕಂಡುಹಿಡಿ ಯುವದ ರೊಂದಿಗೆ ಜಾರಿ ನಿಂತ ಬಂಡೆ ಗಳನ್ನು ಪುಡಿಮಾಡಿ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬೇಕಾಗಿದೆ ಎಂಬದು ಅಲ್ಲಿನ ನಿವಾಸಿಗಳ ಕೋರಿಕೆಯಾಗಿದೆ. ಬ್ರಹ್ಮಗಿರಿ ಬೆಟ್ಟಕ್ಕೂ, ಕೋಳಿಕಲ್ಲು ಬೆಟ್ಟಕ್ಕೂ ಇದುವರೆಗೆ ಹಾನಿ ಯಾಗಿರಲಿಲ್ಲ. ಈ ಬಾರಿ ಈ ಎರಡೂ ಬೆಟ್ಟಗಳಲ್ಲೂ ಹಾನಿ ಸಂಭವಿಸಿ ರುವದು ಸಂಶಯದೊಂದಿಗೆ ಆತಂಕದ ವಿಚಾರವಾಗಿದೆ.

ಪ್ರತ್ಯಕ್ಷ ವರದಿ : ಕುಡೆಕಲ್ ಸಂತೋಷ್, ಕಿರಣ್ ಕುಂಬಳಚೇರಿ