ಸಿದ್ದಾಪುರ ಸೆ.12: ಗುಹ್ಯ ಗ್ರಾಮದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ಮನೆ ಕಳೆದುಕೊಂಡಿದ್ದು, ಗ್ರಾಮದ ಸರಕಾರಿ ಜಾಗವನ್ನು ಕೂಡಲೇ ಸರ್ವೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಗುಹ್ಯ ಹೋರಾಟ ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಪ್ರವಾಹದಿಂದಾಗಿ ಸಿದ್ದಾಪುರದ ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯ ನೂರಾರು ಮನೆಗಳು ನೆಲಕ್ಕುರುಳಿವೆ. ನಿರಾಶ್ರಿತರು ಇದೀಗ ಗುಡಿಸಲಿನಲ್ಲಿ ವಾಸವಾಗಿದ್ದು, ಈ ಹಿಂದೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ನಿರಾಶ್ರಿತರಿಗೆ ಶಾಶ್ವತ ನಿವೇಶನ ಒದಗಿಸುವ ಬಗ್ಗೆ ಭರವಸೆ ನೀಡಿದ್ದರು. ಗುಹ್ಯ ಗ್ರಾಮದಲ್ಲಿ ಸರಕಾರಿ ಜಾಗವಿದ್ದು, ಕೆಲವು ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡಲಾಗಿದೆ. ಮುಂದಿನ 6 ದಿನಗಳಲ್ಲಿ ಸರಕಾರಿ ಜಾಗದ ಸರ್ವೆ ನಡೆಯದಿದ್ದಲ್ಲಿ, ನಿರಾಶ್ರಿತರು ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.

ಸಮಿತಿಯ ಅಧ್ಯಕ್ಷ ಸಿ.ಯು ಮುಸ್ತಫ ಮಾತನಾಡಿ, ಗುಹ್ಯ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗಗಳ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡಲಾಗಿದ್ದು, ನಿರಾಶ್ರಿತರ ಪರವಾಗಿ ಇಲಾಖೆ ಕೆಲಸ ಮಾಡಬೇಕಿದೆ. ಕೂಡಲೇ ಸರಕಾರಿ ಜಾಗವನ್ನು ಗುರುತಿಸಿ, ನಿರಾಶ್ರಿತರಿಗೆ ಹಂಚಬೇಕು. ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನಿರಾಶ್ರಿತರಿಗೆ ಆಯಾ ಗ್ರಾಮದಲ್ಲೇ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿದರು. 6 ದಿನಗಳಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಸರ್ವೆ ಮಾಡದಿದ್ದಲ್ಲಿ, ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರಾದ ಪ್ರತಿಮಾ, ಶೈಲ, ದೇವಜಾನು, ಶಿವಕುಮಾರ್, ಅಬ್ದುಲ್ ಖಾದರ್ ಇದ್ದರು.