ಗೋಣಿಕೊಪ್ಪ, ಸೆ. 12: ಕಳೆದ 19 ವರ್ಷಗಳಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಗೋಣಿಕೊಪ್ಪಲುವಿನ ಮರ್ಚೆಂಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯು 780 ಸದಸ್ಯರನ್ನು ಒಳಗೊಂಡಿದ್ದು, ಕೇವಲ ಪಿಗ್ಮಿ ಬಂಡವಾಳದಿಂದಲೇ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಮಾಹಿತಿ ನೀಡಿದರು.
ಬ್ಯಾಂಕಿನ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಪ್ರಗತಿಯ ಬಗ್ಗೆ ಮಾತನಾಡಿದ ಅರುಣ್ ಪೂಣಚ್ಚ ಗ್ರಾಹಕರ, ಸದಸ್ಯರ ಸಹಕಾರದಿಂದ ಬ್ಯಾಂಕ್ ರೂ. 56,35,301 ಲಕ್ಷ ಲಾಭದಲ್ಲಿದ್ದು ರೂ. 43,16,835 ಲಕ್ಷ ಪಾಲು ಬಂಡವಾಳವಿದೆ, ರೂ. 1,47,84,355 ನಿರಕು ಠೇವಣಿ ಇಡಲಾಗಿದ್ದು ಬ್ಯಾಂಕಿನ ಕಟ್ಟಡ ಬಾಡಿಗೆ ಸಂಗ್ರಹ ರೂ. 15,41,000 ನಿರಕು ಠೇವಣಿ ನೀಡಲಾಗಿದೆ. ಯಾವದೇ ಬ್ಯಾಂಕಿನಿಂದ ಆರ್ಥಿಕ ಸಹಾಯ ಪಡೆಯದೆ ಬ್ಯಾಂಕ್‍ನಲ್ಲಿರುವ ಹಣದಿಂದಲೇ ಜಾಮೀನು, ಪಿಗ್ಮಿ, ಓಡಿ, ನಗದು, ಗಿರವಿ, ಆಭರಣ, ಸಾಲಗಳನ್ನು ನೀಡಲಾಗುತ್ತಿದೆ. ರೂ. 13,16,41,854 ಸಾಲಗಳನ್ನು ನೀಡಲಾಗಿದೆ.
ಶೇ. 81 ಸಾಲ ವಸೂಲಾತಿ ಯಾಗಿದ್ದು, ಮುಂದಿನ ಸಾಲಿನಲ್ಲಿ ಶೇ. 100 ಸಾಲ ವಸೂಲಾತಿ ಮಾಡುವ ಭರವಸೆ ವ್ಯಕ್ತಪಡಿಸಿದ ಇವರು, ಕಳೆದ ಸಾಲಿನಲ್ಲಿ ರೂ. 9,90,63,883 ಸಾಲ ವಾಪಸ್ಸು ಪಡೆಯಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ಡಿವಿಡೆಂಟ್ ನೀಡಲಾಗುತ್ತಿದ್ದು, ವೀರಾಜಪೇಟೆ, ಶ್ರೀಮಂಗಲದ ಶಾಖೆಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ. ಪ್ರತಿ ವರ್ಷ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಾ ಬರಲಾಗುತ್ತಿದ್ದು, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಬ್ಯಾಂಕಿನ ಸದಸ್ಯರು ತಮ್ಮ ಗೌರವ ಧನವನ್ನು ಸ್ವೀಕರಿಸದೆ ಈ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಜಮಾ ಮಾಡುವ ಮೂಲಕ ವಾರ್ಷಿಕವಾಗಿ ಈ ಹಣವನ್ನು ಕಾಲೇಜುಗಳಲ್ಲಿ ಫೀಸ್ ಕಟ್ಟಲು ತೊಂದರೆಯಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಈ ಹಣವನ್ನು ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಸಧ್ಯದಲ್ಲಿಯೇ ವೀರಾಜಪೇಟೆ, ಗೋಣಿಕೊಪ್ಪ ಹಾಗೂ ಶ್ರೀಮಂಗಲದ ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ಕಲ್ಪಿಸಲಾಗುವದು. ವೀರಾಜಪೇಟೆಯಲ್ಲಿ ಬ್ಯಾಂಕಿಗಾಗಿ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವದು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಇಂಟರ್‍ನೆಟ್ ಬ್ಯಾಂಕಿಗ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮಾತನಾಡಿ, ಲೈಸನ್ಸ್ ಹೊಂದಿರುವ ವರ್ತಕರನ್ನು ಬ್ಯಾಂಕಿನ ಸದಸ್ಯರಾಗಿ ನೇಮಿಸಿ ಕೊಳ್ಳಲು ಅವಕಾಶವಿದೆ. ಸಾವಿರಾರು ಸಂಖ್ಯೆಯಲ್ಲಿ ವರ್ತಕರಿದ್ದರೂ ಸೂಕ್ತ ದಾಖಲಾತಿ ಲಭ್ಯವಿಲ್ಲದಿರುವದರಿಂದ ಸದಸ್ಯರ ಸಂಖ್ಯೆ ಕಡಿಮೆಯಿದೆ. ದಾಖಲಾತಿ ಇರುವವರು ಬ್ಯಾಂಕಿನ ಸದಸ್ಯರಾಗಬಹುದೆಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ನಿರ್ದೆಶಕರಾದ ಬಿ.ಎನ್. ಪ್ರಕಾಶ್, ಉಮ್ಮರ್, ನಾಮೇರ ರವಿ, ಚೇಂದಂಡ ಸುಮಿ ಸುಬ್ಬಯ್ಯ, ಎ.ಜೆ. ಬಾಬು, ಬ್ಯಾಂಕಿನ ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಬಿ.ಇ. ಕಿರಣ್ ಉಪಸ್ಥಿತರಿದ್ದರು.