ಗೋಣಿಕೊಪ್ಪಲು, ಸೆ. 10: ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಕೆಲವು ಭಾಗದ ರೈತರಿಗೆ ವಿಶೇಷವಾಗಿ ದಕ್ಷಿಣ ಕೊಡಗಿನ ರೈತರಿಗೆ ಸೇರಿದ ಭತ್ತದ ಗದ್ದೆಗಳಿಗೆ ಮಣ್ಣು ಹಾಗೂ ಮರಳು ತುಂಬಿ ಹೋಗಿದ್ದು, ಕೃಷಿ ಮಾಡಲು ತೊಂದರೆಯಾಗುತ್ತಿದೆ. ಅಲ್ಲದೆ ಈ ಮರಳು-ಮಣ್ಣನ್ನು ತೆಗೆಯಲು ಸರ್ಕಾರ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ. ಆದ್ದರಿಂದ ರೈತರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಕೊಡಗು ಜಿಲ್ಲಾಡಳಿತದ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಮಳೆಯಿಂದ ನದಿ ತೀರ ಒಡೆದು ರೈತರ ಭೂಮಿಯ ಮೇಲೆ ಅಪಾರ ಪ್ರಮಾಣದ ಮಣ್ಣು, ಮರಳು ತುಂಬಿ ನಿಂತಿವೆ. ಸದ್ಯದಮಟ್ಟಿಗೆ ಗದ್ದೆಯಲ್ಲಿ ಬಿದ್ದಿರುವ ಮಣ್ಣು ಮರಳು ಹೊರತೆಗೆಯಲು ಸಾವಿರಾರು ರೂಪಾಯಿ. ಖರ್ಚಾಗಲಿದ್ದು, ಎಲ್ಲಾ ಬೆಳೆಗಳು ಹಾಳಾಗಿವೆ. ಸರ್ಕಾರದಿಂದ ಕೊಟ್ಟ ಪರಿಹಾರ ಎಳ್ಳಷ್ಟು ಸಾಲದು. ಅದರಲ್ಲೂ ಪರಿಹಾರ ರೈತರಿಗೆ ಸಮರ್ಪಕವಾಗಿ ವಿತರಣೆ ಆಗಿಲ್ಲ. ಇದರಿಂದ ರೈತರು ಕಷ್ಟ ಎದುರಿಸುತ್ತಿದ್ದಾರೆಂದು ಮನು ಸೋಮಯ್ಯ ಮನವರಿಕೆ ಮಾಡಿಕೊಟ್ಟರು.
ರೈತರಲ್ಲಿರುವ ಗೊಂದಲವನ್ನು ಸರಿಪಡಿಸಲು ಜಿಲ್ಲಾಡಳಿತದ ಮೂಲಕ ಅಮ್ಮತ್ತಿ, ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ರೈತ ಸಂಘದ ಮುಖಂಡರುಗಳ ಸಮ್ಮುಖದಲ್ಲಿ ಸಭೆ ನಡೆಸಿ ರೈತರಿಗೆ ಆದ ಅನ್ಯಾಯವನ್ನು ಸರಿ ಪಡಿಸಲು ಕ್ರಮ ಕೈಗೊಳ್ಳಬೇಕು. ಎಂದು ಮನವಿ ಮಾಡಿದರು.
ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರು ಯಾವದೇ ಕಾರಣಕ್ಕೂ ಪರಿಹಾರ ವಿತರಣೆಯಲ್ಲಿ ರೈತರಿಗೆ ಲೋಪವಾಗದಂತೆ ಎಚ್ಚರವಹಿಸ ಲಾಗುವದು. ಜಿಲ್ಲಾಧಿಕಾರಿಗಳೊಂದಿಗೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗನೇ ರೈತರೊಂದಿಗೆ ಸಭೆ ನಡೆಸುವ ತೀರ್ಮಾನಕ್ಕೆ ಬರಲಾಗುವದು ಎಂದರು.
ಕೊಡಗು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ರೈತ ಮುಖಂಡರುಗಳಾದ ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ಮಲ್ಚೀರ ಬೋಪಣ್ಣ, ತೀತರಮಾಡ ರಾಜ, ಚಪ್ಪುಡಿರ ಸಿ. ಕುಟ್ಟಪ್ಪ, ಗಾಣಂಗಡ ಉತ್ತಯ್ಯ, ಎಂ.ಬಿ. ಅಶೋಕ್, ಹೆಚ್.ಜೆ. ದಿನೇಶ್, ಹುದಿಕೇರಿ ಹೋಬಳಿ ಸಂಚಾಲಕ ಸೂರಜ್ ಮೊಳ್ಳೇರ ಸಿ. ಮಾಚಯ್ಯ, ಗಣಪತಿ ಮುಂತಾದವರು ಹಾಜರಿದ್ದರು.
- ಹೆಚ್.ಕೆ. ಜಗದೀಶ್