ಕೂಡಿಗೆ, ಸೆ. 10: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತೊರೆನೂರು ಗ್ರಾಮದಲ್ಲಿ ಜನಪರ ಜನಪದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾ ತಂಡಗಳ ಮೆರವಣಿಗೆ ಜನಮನ ಸೂರೆಗೊಂಡಿತು.
ಗ್ರಾಮದ ಬಸವೇಶ್ವರ ದೇವಾಲ ಯದ ಆವರಣದಲ್ಲಿ ಮೆರವಣಿಗೆಗೆ ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಸಾಂಸ್ಕೃತಿಕ ಕಲೆಗಳಿಂದ ಜನಪದ ಬೆಳವಣಿಗೆ ಹೆಚ್ಚುತ್ತದೆ. ಜನಪರ ಉತ್ಸವದಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ; ಈಗಿನ ವಿದೇಶಿ ಸಂಸ್ಕೃತಿಯಿಂದ ಕಲೆ ನಶಿಸುತ್ತಿದೆ. ನಾಡಿನ ಸಂಸ್ಕೃತಿಯ ಬೆಳವಣಿಗೆ, ಉಳಿವಿಗೆ ಪಣತೊಡಬೇಕು. ಎಂದರು.
ರಾಜ್ಯದ ಪ್ರತಿಷ್ಠಿತ ಕಲಾತಂಡಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿಬಂತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ, ಹುಲಿ ಕುಣಿತ, ವೀರಗಾಸೆ, ಕೀಲು ಕುದುರೆ, ಗೊಂಬೆ ಕುಣಿತ, ಪೂಜಾ ಕುಣಿತ, ನಂದಿ ಧ್ವಜ ಕುಣಿತ, ಗೌಡರ ಸುಗ್ಗಿ ಕುಣಿತ, ನಾಡ ವಾದ್ಯ, ಮಂಗಳ ವಾದ್ಯ, ಕಂಸಾಳೆ ಮತ್ತಿತರ ಕಲಾ ತಂಡಗಳು, ವಿಶೇಷ ಘಟಕ, ಯೋಜನೆಯ ಪ್ರಾಯೋಜನೆಯ ಕಾರ್ಯಕ್ರಮ ಸೇರಿದಂತೆ 30. ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಎರಡು ಕಿಮೀವರೆಗೆ ಸಾಗಿ ಬಂದ ಮೆರವಣಿಗೆ ಗ್ರಾಮದ ಸರಕಾರಿ ಶಾಲೆ ಬಳಿ ಸಮಾಪ್ತಿಗೊಂಡಿತು.
ಈ ಸಂದರ್ಭ ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಬಸವ ಸಮಿತಿ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ನಿರ್ದೇಶಕರಾದ ಜಗದೀಶ್ ಲೀಲಾವತಿ, ಗ್ರಾಪಂ ಸದಸ್ಯರಾದ ಈಶ್ವರ, ಮಹೇಶ್, ಮಂಜುಳ, ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಾಚಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಣಜೂರು ಮಂಜುನಾಥ್ ಸೇರಿದಂತೆ ಸಾವಿರಾರು ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.