ಚೆಟ್ಟಳ್ಳಿ, ಸೆ. 10: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವು ಈಗಾಗಲೇ ನಿರಂತರ ಸುರಿಯುವ ಮಳೆಗೆ ತುತ್ತಾಗಿ ಬಿರುಕು ಬಿಟ್ಟಿದ್ದು, ಅದನ್ನು ತಡೆಹಿಡಿಯುವ ಶಕ್ತಿಯು ತಮಿಳುನಾಡಿನ ‘ವೆಟ್ರಿವೇರಾ’ ಎನ್ನುವ ಹುಲ್ಲಿಗಿದೆ ಎನ್ನುವದು ತಜ್ಞರ ಅಭಿಮತ. ಈ ಹುಲ್ಲನ್ನು ಕಳೆದ ಮಹಾಮಳೆಗೆ ತುತ್ತಾಗಿದ್ದ ಮಡಿಕೇರಿ ಸನಿಹದ ಗ್ರಾಮಗಳ ಬರೆಗಳಿಗೆ ಇನ್ನು ಮುಂದೆ ಜಾರದಂತೆ ನೆಡುವ ಸಲುವಾಗಿ ತಮಿಳುನಾಡಿನಿಂದ ಅದರ ಸಸಿಮಡಿಗಳನ್ನು ತರಲಾಗಿತ್ತು. ಹಾಕತ್ತೂರಿನ ತೇಲಪಂಡ ಪ್ರಮೋದ್ ಅವರ ಮೂರು ಎಕರೆ ಗದ್ದೆಯಲ್ಲಿ ಮಡಿಕೇರಿಯ ಕೊಡಗು ಸೇವಾಕೇಂದ್ರದ ವತಿಯಿಂದ ತಂದು ನೆಟ್ಟು ಬೆಳೆಸಲಾಗಿತ್ತು.ಈಗಾಗಲೇ ಬ್ರಹ್ಮಗಿರಿ ಬೆಟ್ಟವು ಬಿರುಕು ಬಿಟ್ಟು ಅಪಾಯದ ಸ್ಥಿತಿ ತಲಪಿರುವದರಿಂದ ಅದರಲ್ಲಿ 2000 ಹುಲ್ಲು ಗಿಡಗಳನ್ನು ತಂದು ಬ್ರಹ್ಮಗಿರಿಯಲ್ಲಿ ತಾ. 13 ರಂದು ಬೆಳಿಗ್ಗೆ 9 ಗಂಟೆಗೆ ಕೊಡಗು ಸೇವಾ ಕೇಂದ್ರದ ಸದಸ್ಯರು, ದೇವಸ್ಥಾನ ವ್ಯವಸ್ಥಾಪನಾ ಮತ್ತು ಆಡಳಿತದವರು, ಅರ್ಚಕ ಸಮೂಹ ಮತ್ತು ಅರಣ್ಯ ಇಲಾಖೆ ಒಡಗೂಡಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದೆಂದು ಭಾಗಮಂಡಲ-ತಲಕಾವೇರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತಿಳಿಸಿದ್ದಾರೆ. ಈ ಕಾರ್ಯಕ್ಕೆ ಸಹಕರಿಸಲು ಯಾವದಾದರು ಸಂಘಸಂಸ್ಥೆ, ಸಾರ್ವಜನಿಕರು ಹಾಗೂ ವಿದ್ಯಾಸಂಸ್ಥೆ ಭಾಗಿಗಳಾಗುವದಾದರೆ ಸ್ವಾಗತಿಸಲಾಗುವದೆಂದರು. -ಪುತ್ತರಿರ ಪಪ್ಪು ತಿಮ್ಮಯ್ಯ