ಮಡಿಕೇರಿ, ಸೆ. 10: ವಿಶ್ವಕಂಡ ಮಹಾನ್ ಸೇನಾನಿ, ದೇಶದ ಪ್ರಪ್ರಥಮ ಹಾಗೂ ಏಕೈಕ ಮಹಾದಂಡನಾಯಕರಾಗಿದ್ದ ಕೊಡಗಿನ ಹೆಮ್ಮೆಯ ಪುತ್ರ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆ ಕಳೆದು ಈಗಾಗಲೇ ಏಳು ತಿಂಗಳು ಪೂರ್ಣಗೊಂಡಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಘೋಷಣೆಯಾಗಿದ್ದ ಅನುದಾನ ಈ ತನಕ ಬಂದಿಲ್ಲ ಎಂಬದು ‘ಶಕ್ತಿ’ಗೆ ತಿಳಿದು ಬಂದಿದೆ. ಶಿಸ್ತಿಗೆ ಹಾಗೂ ದೇಶದ ಸೇನಾ ಇತಿಹಾಸಕ್ಕೆ ಖ್ಯಾತಿ ಪಡೆದಿರುವ ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನಾಚರಣೆ ಜನವರಿ 28 ರಂದು ಬರುತ್ತದೆ. ಇದನ್ನು ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಮಾಜಿ ಸೇನಾಧಿಕಾರಿಗಳು ಹಾಗೂ ಇತರ ಪ್ರಮುಖರನ್ನು ಒಳಗೊಂಡಂತೆ ಅಸ್ತಿತ್ವಕ್ಕೆ ಬಂದ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ವತಿಯಿಂದ ಆಚರಿಸುವ ಪ್ರಯತ್ನ ಆರಂಭವಾಗಿತ್ತು.ಬಳಿಕ ಇದು ಜಿಲ್ಲೆಯ ಮಟ್ಟಿಗೆ ಸರಕಾರಿ ಕಾರ್ಯಕ್ರಮವಾಗಿ ರೂಪುಗೊಂಡು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಆಚರಿಸುವಂತಾಗಿತ್ತು. ಆದರೆ 2019ರ ಕಾರ್ಯಕ್ರಮದ ಬಗ್ಗೆ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ತೀರಾ ನಿರ್ಲಕ್ಷ್ಯ ತೋರಿದ್ದು, ಇಲಾಖೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಬಗ್ಗೆ ಯಾವದೇ ಪ್ರಸ್ತಾಪವಿಲ್ಲದೆ ಗೊಂದಲಕ್ಕೆ ಎಡೆಯಾಗಿತ್ತು. ದೇಶದಲ್ಲಿ ‘ಆರ್ಮಿಡೇ’ ಕಾರ್ಯಪ್ಪ ಅವರು ಅಧಿಕಾರ ಪಡೆದ ದಿನ (ಜ.14) ಆಚರಿಸಲ್ಪಡುತ್ತದೆ. ನವದೆಹಲಿಯಲ್ಲಿರುವ ಸೇನಾ ಪೆರೇಡ್ ಮೈದಾನಕ್ಕೆ ಕೂಡ ಭಾರತೀಯ ಸೇನೆ ಇವರ ಹೆಸರನ್ನು ನೇಮಕ ಮಾಡಿದೆ. ಆದರೆ ರಾಜ್ಯದಲ್ಲಿ ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಕುರಿತಾಗಿ ನಿರ್ಲಕ್ಷ್ಯ ಧೋರಣೆ ಕಂಡು ಬಂದಿದ್ದ ಬಗ್ಗೆ ವರದಿಯಾದ ಬೆನ್ನಲ್ಲೇ ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿತ್ತು.

ಒಂದು ವೇಳೆ ಸರಕಾರ ಈ ಹಿಂದಿನಂತೆ ಕಾರ್ಯಪ್ಪ ಜನ್ಮದಿನವನ್ನು ಆಚರಿಸದಿದ್ದಲ್ಲಿ ಫೋರಂ ಸೇರಿದಂತೆ ಇತರ ಸಂಘಟನೆಗಳ ಮೂಲಕ ಇದನ್ನು ಆಚರಿಸುವ ಎಚ್ಚರಿಕೆ ನೀಡಲಾಗಿತ್ತು. ಈ ಪ್ರತಿರೋಧಗಳ ನಡುವೆ ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಆ ಸಂದರ್ಭ ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದು, ಜಿಲ್ಲೆಯ ಮತ್ತೋರ್ವ ಶಾಸಕಿ ವೀಣಾ ಅಚ್ಚಯ್ಯ ಅವರೂ ಮೇಲ್ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು. ಇದೆಲ್ಲದರ ಫಲಶ್ರುತಿ ಎಂಬಂತೆ ಜನ್ಮದಿನಾಚರಣೆಗೆ ಕೇವಲ ಎರಡು ದಿನಗಳ ಸಮಯ ಬಾಕಿ ಉಳಿದಿದ್ದ ಸಂದರ್ಭ ಆಗಿನ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಈ ಹಿಂದಿನಂತೆ ಸರಕಾರಿ ಕಾರ್ಯಕ್ರಮವಾಗಿ ಜಯಂತಿ ಆಚರಿಸುವದನ್ನು ಮುಂದುವರಿಸುವಂತೆ ಸೂಚಿಸಿ ರೂ. 10 ಲಕ್ಷ ಅನುದಾನ ಪ್ರಕಟಿಸಿದ್ದರು. ಇದರಂತೆ ಜಿಲ್ಲಾ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ತರಾತುರಿಯಾದರೂ ಸರಕಾರಿ ಕಾರ್ಯಕ್ರಮ ಜರುಗಿದ್ದನ್ನು ಸ್ಮರಿಸಬಹುದಾಗಿದೆ.

ಆದರೆ ಇದೀಗ ಜನವರಿ 28 ಕಳೆದು 7 ತಿಂಗಳು ಪೂರ್ಣಗೊಂಡಿದ್ದರೂ ಇಲಾಖೆಗೆ ಸರಕಾರದಿಂದ ಈ ಕಾರ್ಯಕ್ರಮದ ಬಾಪ್ತು ನಯಾಪೈಸೆ ಕೂಡ ಬಂದಿಲ್ಲ ಎಂದು ತಿಳಿದು ಬಂದಿದೆ. ಕಾರ್ಯಪ್ಪ ಜಯಂತಿ ವಿಚಾರ ಒಂದೆಡೆಯಾದರೆ,

(ಮೊದಲ ಪುಟದಿಂದ) ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸಂಬಂಧಿಸಿದ ಇನ್ನು ಹಲವು ಯೋಜನೆಗಳು ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿವೆ. ಇದರಲ್ಲಿ ಮಡಿಕೇರಿಯ ಸುವರ್ಣ ಸಾಂಸ್ಕøತಿಕ ಸಮುಚ್ಚಯ ಭವನ, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಕುಶಾಲನಗರದ ಕಲಾಭವನಗಳೂ ಸೇರಿವೆ. ಈ ಕಾಮಗಾರಿಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಹಲವಷ್ಟು ಅನುದಾನ ವರ್ಷಗಟ್ಟಲೆಯಿಂದ ಬರಲು ಬಾಕಿ ಇದ್ದು, ಈ ಕೆಲಸ - ಕಾರ್ಯಗಳು ಈಗಲೂ ನೆನೆಗುದಿಯಲ್ಲೇ ಉಳಿದಿವೆ. ಕೊಡಗು ಜಿಲ್ಲೆಯ ಬಗ್ಗೆ ಸರಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಈ ರೀತಿಯ ನಿರ್ಲಕ್ಷ್ಯ ಭಾವನೆ ತೋರುತ್ತಿರುವದು ಜಿಲ್ಲೆಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ನೂತನ ಸಚಿವರು ಸ್ಪಂದಿಸುವರೇ?

ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೊಂಡಿದ್ದು, ಪ್ರವಾಸೋದ್ಯಮ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವರಾಗಿ ಕೊಡಗಿನ ನೆರೆ ಜಿಲ್ಲೆಯವರಾದ ಸಿ.ಟಿ. ರವಿ ಅವರು ಆಯ್ಕೆಯಾಗಿದ್ದಾರೆ. ಇವರೊಂದಿಗೆ ಜಿಲ್ಲೆಯ ಬಿಜೆಪಿ ಶಾಸರಕಗಳೂ ಇದ್ದು, ಇವರೆಲ್ಲರಿಗೂ ಇವೆಲ್ಲದರ ಅರಿವಿದೆ. ನೂತನ ಸಚಿವರು ತಾ. 11 ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದು, ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಇವರು ಈ ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿರುವರೇ ಎಂದು ಕಾದು ನೋಡಬೇಕಿದೆ.

-ಶಶಿ ಸೋಮಯ್ಯ