ಕೂಡಿಗೆ, ಸೆ. 10. ಗ್ರಾಮೀಣ ಪ್ರದೇಶಗಳಲ್ಲಿ ಕಲೆ, ಸಂಸ್ಕೃತಿಗಳ ಉಳಿಯುವಿಕೆ ಮತ್ತು ನಾಡಿನ ಮೂಲ ಸಂಸ್ಕೃತಿ ಬೆಳವಣಿಗೆಗೆ ಇಂತಹ ಜನಪರ ಉತ್ಸವ ಮುಖ್ಯ ಎಂದು ಮಡಿಕೇರಿ ಕೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಅವರು ತೊರೆನೂರು ಗ್ರಾಮದಲ್ಲಿ ಆಯೋಜಿಸಿದ್ದ ಜನಪದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶಿಯ ಕಲಾಸಂಸ್ಕೃತಿಗಳ ಉಳಿವಿನಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ, ಕೊಡಗು ಜಿಲ್ಲೆ ತನ್ನ ಆಚಾರ, ವಿಚಾರದಲ್ಲಿ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಇಂತಹ ಜನಪದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವದರಿಂದ ಯುವಕರಿಗೆ ಮತ್ತು ಮುಂದಿನ ಪೀಳಿಗೆಗೆ ಅನುಕೂಲ ವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯವನ್ನು ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಹೆಬ್ಬಾಲೆ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಆರ್. ಶ್ರೀನಿವಾಸ್ ಮಾತನಾಡಿ, ಶಾಸಕರ ನಿಧಿಯಿಂದ ಪ್ರಮುಖವಾಗಿ ಗ್ರಾಮದ ರಸ್ತಗಳ ದುರಸ್ತಿ ಹಾಗೂ ಮಳೆಯಿಂದಾಗಿ (ಮೊದಲ ಪುಟದಿಂದ) ಸರಕಾರಿ ಪ್ರೌಢಶಾಲಾ ಗೋಡೆ ಬೀಳುವ ಹಂತ ತಲಪಿದೆ ಇದರ ದುರಸ್ತಿಗೆ ಹೆಚ್ಚು ಹಣವನ್ನು ಒದಗಿಸಬೇಕೆಂದು ಮನವಿ ಮಾಡಿದರು. ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ರೈತರ ಸಾಲಮನ್ನಾದ ವಿಚಾರವಾಗಿ ಹಣ ಬಾರದಿರುವ ಬಗ್ಗೆ ತಿಳಿಸಿದರು. ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ತೊರೆನೂರು ಗ್ರಾಮದಲ್ಲಿ ಹಮ್ಮಿಕೊಂಡ ಜನಪರ ಉತ್ಸವ ಹಾಗೂ ಜನಪದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವು ಗ್ರಾಮಸ್ಥರನ್ನು ಒಂದೆಡೆ ಸೇರಿಸುವ ಜೊತೆಗೆ ನಾಡಿನ ಹೆಸರಾಂತ ಕಲಾವಿದರ ಕಲೆಯನ್ನು ನೋಡುವ ಅವಕಾಶ ಗ್ರಾಮೀಣ ಜನರಿಗೆ ದೊರತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಬಿ. ದೇವರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕುಶಾಲನಗರ ಸಹಕಾರ ಸಂಘದ ನಿರ್ದೇಶಕ ಟಿ.ಬಿ. ಜಗದೀಶ್, ವೀರಶೈವ ಸಮಾಜ ಅಧ್ಯಕ್ಷ ವಿಶ್ವೇಶ್ವರಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಈಶ್ವರ, ಮಹೇಶ್ ಸೇರಿದಂತೆ ಗ್ರಾಮದ ವಿವಿಧ ಸಂಘಗಳ ಪ್ರಮುಖರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳು, ನೀರು ಬಳಕೆದಾರರ ಸಂಘದ ಅಧ್ಯಕ್ಷರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ, ಅಧಿಕಾರಿ ಮಣಜೂರು ಮಂಜುನಾಥ ಉಪಸ್ಥಿತರಿದ್ದರು.
ಗಾರುಡಿಗೊಂಬಿ ಕುಣಿತ, ಕಂಸಾಳೆ, ಗೌರೀಶ ತಂಡದಿಂದ ಡೊಳ್ಳು ಕುಣಿತ, ಪೂಜಾ ಕುಣಿತ, ಹುಲಿವೇಷ, ಕೀಲುಕುದುರೆ, ಕೊಡವ ವಾದ್ಯ, ಸುಗ್ಗಿ ಕುಣಿತ, ವೀರಗಾಸೆ ನಗಾರಿ, ಮಹದೇವಯ್ಯನ ತಮಟೆ ತಂಡ, ಭಜನೆ ತಂಡ, ಗೊರವರ ಕುಣಿತ, ರಂಗಗೀತೆ, ಗೀಗೀಪದ, ಲಾವಣಿ ಜಾನಪದ ನೃತ್ಯ, ಕೋಲಾಟ, ನಗೆಹಬ್ಬ, ಜಾನಪದ ಗೀತಾಗಾಯನ ನೃತ್ಯ ರೂಪಕ, ಚಿಟ್ಟಿಮೇಳ ಸೋಮನ ಕುಣಿತ, ಸ್ಯಾಕ್ಸೋ ವಾದನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
- ಕೆ.ಕೆ. ನಾಗರಾಜ ಶೆಟ್ಟಿ