ಮಡಿಕೇರಿ, ಸೆ. 10: ಇತ್ತೀಚೆಗೆ ಸಮಾಧಿಸ್ತರಾದ ಸದ್ಗುರು ಬಿದ್ದಂಡ ಸುಬ್ಬಯ್ಯ ಅವರ ಸ್ಮರಣಾರ್ಥ ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದ ವತಿಯಿಂದ ಅವರ ಹೆಸರಿನಲ್ಲಿ ಮಡಿಕೇರಿಯಲ್ಲಿ ಕಾನೂನು ಕಾಲೇಜು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಎಸ್. ದೇವಯ್ಯ ನುಡಿದರು.ಇತ್ತೀಚೆಗೆ ಸದ್ಗುರು ಸುಬ್ಬಯ್ಯ ಅವರ ಹದಿಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕೊಡಗು ವಿದ್ಯಾಲಯದಲ್ಲಿ ಕಾನೂನು ಕಾಲೇಜು ಸ್ಥಾಪಿಸುವ ಆಶಯ ಸುಬ್ಬಯ್ಯ ಅವರದಾಗಿತ್ತು ಎಂದರು. ಅವರ ಆಸೆ ಪೂರೈಸುವ ಜವಾಬ್ದಾರಿ ತಮ್ಮ ಮೇಲಿದ್ದು, ವಿದ್ಯಾಲಯ ಹಾಗೂ ವಿದ್ಯಾಭವನದ ಸಮಿತಿಯೆದುರು ಪ್ರಸ್ತಾವನೆ ಸಲ್ಲಿಸಿ, ಮುಂದಿನ ಹೆಜ್ಜೆ ಇರಿಸುವದಾಗಿ ಹೇಳಿದರು. ಸುಬ್ಬಯ್ಯ ಅವರು ಉತ್ತಮ ಕ್ರಿಕೆಟ್ ಪಟುವಾಗಿದ್ದು, ಶಟಲ್ ಬ್ಯಾಡ್ಮಿಂಟನ್ ಕೂಡ ಅಷ್ಟೇ ಉತ್ತಮವಾಗಿ ಆಡುತ್ತಿದ್ದರು ಎಂದರು.ವಿದ್ಯಾಭವನದ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ ಅವರು (ಮೊದಲ ಪುಟದಿಂದ) ಮಾತನಾಡಿ, ಸುಬ್ಬಯ್ಯ ಅವರ ನಡೆ ಇತರರಿಗೆ ಆದರ್ಶವಾಗಿತ್ತು ಎಂದರು.
‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಸುಬ್ಬಯ್ಯ ಅವರ ಅನುಯಾಯಿಗಳಿಗೆ ಆಗುತ್ತಿದ್ದ ವಿಶೇಷ ಅನುಭವಗಳು ಹಾಗೂ ಅವರ ಬೋಧನೆಯ ಕುರಿತು ಮಾತನಾಡಿದರು.
ಪೂನಾ ಮೂಲದ ಯೋಗಿನಿ ನೀಲಮ್ಮ, ಅನುಯಾಯಿಗಳಾದ ಶ್ರೀವಿದ್ಯಾ, ನೇತ್ರಾ ಹಾಗೂ ಗಿರೀಶ್ ಹಾಡಿನ ಮೂಲಕ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿದರು. ಸುಬ್ಬಯ್ಯ ಅವರ ಕುಟುಂಬ ಮತ್ತು ಬಳಗ ಹಾಜರಿದ್ದರು.